ಅಗೋ ಆಡುತ್ತಿದ್ದಾರೆ ತರಳೆಗಳು
ಚುಕುಬುಕುವೋ, ಕಣ್ಣಾಮುಚ್ಚಾಲೆಯೋ,
ಮರಕೋತಿ ಆಟವೋ, ಗಿಲ್ಲಿ-ದಾಂಡೋ,
ತಿಳಿಯದು
ಒಬ್ಬರಿಗೊಬ್ಬರು, ಒಬ್ಬರನ್ನೊಬ್ಬರು,
ಮತ್ತೊಬ್ಬನಿಗೆ ಇನ್ನೊಬ್ಬನು,
ಮುಟ್ಟಿ, ತಟ್ಟಿ, ಅಪ್ಪಿ, ಗುದ್ದಿ,
ಏನೂ ತಿಳಿಯದೆ, ಮಕ್ಕಳ ಜೊತೆಯಲಿ
ಕುಣಿದು ಕುಪ್ಪಳಿಸುವ ತರಳೆಗಳು
ಕುಂಟೆ ಬಿಲ್ಲೆ ಆಟವಾಡುವ?
ಬೇಡ ಬೇಡ!
ಕಣ್ಣಾಮುಚ್ಚಾಲೆ ಆಡುವ?
ಬೇಡ ಬೇಡ!
ಕಳ್ಳಾ-ಪೋಲಿಸ್ ಆಡುವ?
ಬೇಡ ಬೇಡ!
ಸ್ಕೂಲ್ ಆಟ ಆಡುವ?
ಆಡುವ; ಆಡುವ ಎಂದು
ಟೀಚರು, ಮಕ್ಕಳು, ಜೊತೆಗೆ ಬೆತ್ತ
ಸ್ಲೇಟು, ಬಳಪ, ಜೊತೆಗೆ ಚಿತ್ತ
ಎಲ್ಲರೂ ಕೂಡಿ ಒಟ್ಟಾಗಿ ಆಡುವ ಆಟ
ಸ್ಕೂಲ್ ಆಟ ಶುರುವಾಯಿತು ಪಾಠ!
ಅ, ಆ, ಇ, ಈ ಎಲ್ಲವೂ ಓದಿ
ಟೀಚರ್ ಹೇಳಿದ ಪಾಠವ ಬರೆದು
ಮನೆಯಲ್ಲಿ ಅಮ್ಮ ಕರೆಯಲು ಬೇಗ
ಟೀಚರ್ ಕೂರಲು ಹೇಳಲು ಆಗ
ಬಯಕೆ ಹೆದರಿ ಹೋಡಲು ಬೇಗ!
ಅಮ್ಮನು ಹೇಳಿದ ಕೆಲಸವ ಮುಗಿಸಿ
ಆಟಕೆ ಬಂದು ಸೇರಲು ಜೊತೆಯಲಿ
ಟೀಚರ್ ಬೆತ್ತದಿ ಬಾರಿಸಲು
ತಕ್ಷಣವೆ!
ನೀನ್ಯಾರು ನನಗೆ ಒಡೆಯಲು ಎಂದು
ಟೀಚರ್ಗೆ ಬಾರಿಸಲು ಆಗ
ಮಕ್ಕಳ ಕೂಟದಿ ಜಗಳದ ಬಿರುಸು
ಆಟವೂ ಬೇಡ, ಪಾಠವೂ ಬೇಡ
ಕೂಟದಿ ಒಡಕು ಶುರುವಾಗಲು
ಪೂರ್ವದಲ್ಲೋಂದು ಮುಖ, ಪಶ್ಚಿಮದಲ್ಲೋಂದು ಮುಖ
ಮರುದಿನದಿ ಮತ್ತೊಂದು ಆಟವ ಆಡಲು
ಪೂರ್ವದ ಮುಖಗಳು, ಪಶ್ಚಿಮದ ಮುಖಗಳು
ಎಲ್ಲರೂ ಸೇರಿ ಬೇರೊಂದು ಆಟವ ಆಡಲು
ಎರಡು ಮುಖಗಳು, ಒಂದೇ ಮುಖವಾಗಿ
ಕೂಡುತ ಆಟವ ಆಡಿದರು
ನೆನಪಿನ ಸುರುಳಿಯಲ್ಲಿ ಬಾಲ್ಯದ ನೆನಪು
ಮಿಂಚಿ ಮರೆಯಾಗಲು............!