11 Jun 2011

ಶೈಕ್ಷಣಿಕ ಭೇಟಿ : ಮುದ್ರಣ ವಿಭಾಗ (ದಿ ಪ್ರಿಂಟರ್ಸ್ ಮೈಸೂರು ಲಿ.)

ಶೈಕ್ಷಣಿಕ ಭೇಟಿ : ಮುದ್ರಣ ವಿಭಾಗ (ದಿ ಪ್ರಿಂಟರ್ಸ್ ಮೈಸೂರು ಲಿ.)
ಕೇವಲ ಶಿರ್ಷಿಕೆ, ಜಾಹಿರಾತು ಸಂಸ್ಥೆಗಳು, ಪತ್ರಿಕೆಗಳ ಉಗಮ, ಇತ್ಯಾದಿಗಳ ಬಗ್ಗೆ ಮಾತ್ರ ತಿಳಿದಿದ್ದ ನಮಗೆ ಪತ್ರಿಕಗಳು ಹೇಗೆ ಮುದ್ರತವಾಗುತ್ತವೆ, ಅದಕ್ಕೆ ಬಳಸುವ ತಂತ್ರಜ್ಞಾನವಾದರೂ ಏನು? ಪತ್ರಿಕೆಗಳು ಅಕ್ಷರಗಳ ಅಚ್ಚುಗಳ ಮೂಲಕ ಮುದ್ರಿತವಾಗುತ್ತದೆಯೆ? ಅಥವಾ ಆಧುನಿಕ ಜೆರಾಕ್ಸ್ ಯಂತ್ರದ ರೀತಿಯಲ್ಲಿ ಮುದ್ರಿತವಾಗುತ್ತವೆಯೋ? ಇಲ್ಲ ಇನ್ನೇನಾದರೂ ಬೇರೆ ರೀತಿಯ ತಂತ್ರಜ್ಞಾನದ ಸಹಾಯದಿಂದ ಮುದ್ರಣ ನಡೆಸಲಾಗುತ್ತದೆಯೋ ಎಂಬ ನಮ್ಮೆಲ್ಲರ ಕುತೂಹಲದ ಪ್ರಶ್ನೆಗಳಿಗೆ ಉತ್ತರವೆಂಬಂತೆ ಕೆಲವೇ ದಿನಗಳ ಹಿಂದೆ ಪತ್ರಿಕೋದ್ಯಮ ವಿದ್ಯಾರ್ಥಿ ಸಮೂಹವು (ಅಂತಿಮ ಬಿ.ಎ.) ಶೈಕ್ಷಣಿಕ ಮಾಹಿತಿಗಾಗಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಶ್ರೀಮತ ಕುಸುಮಾರಾಮಚಂದ್ರರವರ ಮಾರ್ಗದರ್ಶನದಲ್ಲಿ ಬೇಟಿನೀಡಿದ್ದ ದಿ ಪ್ರಿಂಟರ್ಸ ಮೈಸೂರು ಲಿ. (ಪ್ರಜಾವಾಣಿ) ಮುದ್ರಣ ವಿಭಾಗವು ನಮ್ಮೆಲ್ಲ ಕುತೂಹಲ ಪ್ರಶ್ನೆಗಳಿಗೆ ಉತ್ತರ ನೀಡಿತು.

ಮುದ್ರಣವೆಂದರೆ ಅತಿ ಸುಲಭವಾದ ಕೆಲಸವಲ್ಲ ಅದೊಂದು ಸಂಕೀರ್ಣವಾದ, ಅತೀ ತಾಂತ್ರಿಕತೆಯುಳ್ಳ, ಜವಾಬ್ದಾರಿಯುತ ಹಾಗೂ ಕೌಶಲ್ಯಪೂರ್ಣವಾದ ಪ್ರಕ್ರಿಯೆ ಎಂಬುದರ ಅರಿವಾದದ್ದೇ ಆಗ, ಮುದ್ರಣದ ಒಂದೊಂದು ಪ್ರಕ್ರಿಯೆಗೂ ಒಂದೊಂದು ಪ್ರತ್ಯೇಕ ವಿಭಾಗಗಳಿವೆ ಎಂಬುದು ತಿಳಿಯಿತು,  ಉದಾಹರಣೆಗೆ : - ಪ್ಲೇಟ್ ಮೇಕಿಂಗ್ ವಿಭಾಗ (C.T.P.ತಂತ್ರಜ್ಞಾನ), ಪ್ರಿಂಟಿಂಗ್ ವಿಭಾಗ (ಪ್ರೊಡಕ್ಷನ್), ಪ್ಯಾಕಿಂಗ್ ವಿಭಾಗ ಎಂಬಂತೆ ಇನ್ನೂ ಹಲವಾರು ವಿಭಾಗಗಳಾಗಿ ವಿಂಗಡಿಸಲ್ಪಟ್ಟಿರುತ್ತದೆ, ಒಂದು ಅಚ್ಚರಿಯ ವಿಷಯವೆಂದರೆ ದಕ್ಷಿಣ ಭಾರತದಲ್ಲಿ ಮೊಟ್ಟಮೊದಲಬಾರಿಗೆ ಜರ್ಮನ್ ತಂತ್ರಜ್ಞಾನವನ್ನು ಮುದ್ರಣ ಪ್ರಕ್ರಿಯೆಯಲ್ಲಿ ಅಳವಡಿಸಿಕೊಂಡ ಸಂಸ್ಥೆ ಎಂಬ ಹೆಗ್ಗಳಿಕೆಯೂ ಸಹ 'ದಿ ಪ್ರಿಂಟರ್ಸ್ ಮೈಸೂರು ಲಿ. ಗೆ ಸೇರುತ್ತದೆ, ಪತ್ರಿಕೆಗಳ ಗುಣಮಟ್ಟವನ್ನು ಹೆಚ್ಚಿಸಲೆಂದೆ ಜರ್ಮನಿಯ 'ಕೆ.ಬಿ.ಎ. ಕಲೋರ' ಎಂಬ ಬೃಹತ್ ಯಂತ್ರವನ್ನು (ಸುಮಾರು 4 ಮಹಡಿಗಳಷ್ಟು ಎತ್ತರ, 80 ಅಡಿ ಉದ್ದ, 10-15 ಅಡಿ ಅಗಲ) ಆಮದು ಮಾಡಿಕೊಳ್ಳಲಾಗಿದೆ. ಇಂತಹ ಬೃಹತ್ ಮುದ್ರಣ ಯಂತ್ರಗಳೂ ಇರುತ್ತವೆ ಎಂಬ ಅನುಭವ ನಮಗಾದದ್ದು ಅದೇ ಮೊದಲು,

ಕುತೂಹಲದೊಂದಿಗೆ ಸಂಸ್ಥೆಯನ್ನು ತಲುಪಿದ ನಮಗೆ ಮೊದಲು ಎದುರಾದ್ದದ್ದು ಅಲ್ಲಿನ ಭದ್ರತಾ ವಿಭಾಗದ ಸಿಬ್ಬಂದಿಗಳು, ಪೂರ್ವಸಿದ್ಧತೆಯ ಕೊರತೆಯ ಕಾರಣದಿಂದಾಗಿ ಅಲ್ಪ ಗೊಂದಲವನ್ನೂ ಎದುರಿಸಬೇಕಾಯಿತು, ಕೊನೆಗೆ ಅಲ್ಲಿಯ ಕಾರ್ಯನಿರ್ವಹಣಾ ಅಧಿಕಾರಿಗಳ ಒಪ್ಪಿಗೆಯ ಮೇರೆಗೆ ಒಬ್ಬ ಸಲಹೆಗಾರರ ಜೊತೆಗೆ ಮುದ್ರಣ ವಿಭಾಗಕ್ಕೆ ತಲುಪಿದೆವು, ಅಲ್ಲಿ ಕಂಡದ್ದು ನಮ್ಮೆಲ್ಲರ ಹುಸಿ ನಂಬಿಕೆಗಳನ್ನು ತಲೆಯಿಂದ ಒಂದೇ ಬಾರಿಗೆ ಓಡಿಸಿತು. ಅದೊಂದು ದೊಡ್ಡದಾದ 'ಹಾಲ್', ಆ ಪೂರ್ಣ ಹಾಲ್ಅನ್ನು ಆವರಿಸಿಕೊಂಡಂತೆ K.B.A. ಯಂತ್ರ, ಜೊತೆಗೆ ಅಲ್ಲಲ್ಲಿ ನೀಲಿ ಧಿರಿಸುಗಳನ್ನು ಉಟ್ಟು ಕೆಲಸದಲ್ಲಿ ಮಗ್ನರಾದ ಕೆಲಸಗಾರರು, ಇವರೆಲ್ಲ ಪತ್ರಕರ್ತರಲ್ಲದಿದ್ದರು ಇವರನ್ನು ಪತ್ರಕರ್ತೇತರರೆಂದು ಗುರುತಿಸುತ್ತಾರೆ. ನಮಗೆ ಜೊತೆಯಾದ ಆ ಸಲಹೆಗಾರರು ನಮ್ಮೆಲ್ಲರಿಗೂ ಪ್ರತಿಯೊಂದು ವಿಷಯಗಳ ಬಗ್ಗೆಯೂ ಅತ್ಯಂತ ಸೂಕ್ಷ್ಮವಾಗಿ, ತಾಳ್ಮೆಯಿಂದ ವಿದ್ಯಾರ್ಥಿಗಳು ಕೇಳುವ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುತ್ತ, ಒಂದು ಕಡೆಯಿಂದ ಮತ್ತೊಂದು ಕಡೆಗೆ, ಕೆಳಗಿನಿಂದ ಮೇಲಕ್ಕೆ, ಮೇಲಿನಿಂದ ಕೆಳಕ್ಕೆ ಹೀಗೆ ಇಡೀ ಆ ಮುದ್ರಣ ವಿಭಾಗದ ದರ್ಶನವನ್ನೇ ಮಾಡಿಸಿಕೊಟ್ಟರು.

ನಮಗೆಲ್ಲರಿಗೂ ತಿಳಿದಂತೆ ವರದಿಗಳ ಸಂಗ್ರಹಣೆಯ ನಂತರ ಅದು ಬೆರಳಚ್ಚು ವಿಭಾಗಕ್ಕೆ ವರ್ಗಾವಣೆ ಹೊಂದುತ್ತದೆ, ಹೀಗೆ ವರ್ಗಾವಣೆಗೊಂಡ ನಂತರ ಆ ವಿಷಯಗಳನ್ನೊಳಗೊಂಡ ಒಂದು ಮಾದರಿ 'ಪ್ಲೇಟ್ ಮೇಕಿಂಗ್' ( Computer to plate (C.T.P) ) ವಿಭಾಗಕ್ಕೆ ರವಾನಿಸಲಾಗುತ್ತದೆ. ನಂತರ ಸುದ್ಧಿಯನ್ನು ಪುಟಗಳ ಸಮೇತ ಒಂದು 'ಅಲ್ಯೂಮೀನಿಯಂ ಪ್ಲೇಟ್'ನ ಮೇಲೆ ಮುದ್ರಿತವಾಗುತ್ತದೆ, ಹೀಗೆ ಒಂದೊಂದು ಪುಟಕ್ಕೆ ಒಂದೊಂದು ಅಲ್ಯೂಮೀನಿಯಂ ಪ್ಲೇಟ್ಗಳನ್ನು ತಯಾರಿಸಿಕೊಂಡು ಮುದ್ರಣ ಯಂತ್ರಕ್ಕೆ ಪುಟಗಳ ಸಂಖ್ಯೆಯ ಪ್ರಕಾರ ಪ್ಲೇಟ್ಗಳನ್ನು ಮುದ್ರಣ ಯಂತ್ರಕ್ಕೆ ಅಳವಡಿಸುತ್ತಾರೆ, ಹೀಗೆ ಅಳವಡಿಸಿದ ಮೇಲೆ ಯಂತ್ರವನ್ನು ಚಾಲು ಮಾಡಲಾಗುತ್ತದೆ, ಹೀಗೆ ಒಂದು ಗಂಟೆಯ ಅವಧಿಯಲ್ಲಿ  24 ಪುಟಗಳ 70,000 ಪ್ರತಿಗಳನ್ನು ಮುದ್ರಿಸುವ ಸಾಮಥ್ರ್ಯವು ಆ ಯಂತ್ರಕ್ಕಿದೆ, ಅಲ್ಲಿನ ಮಾರ್ಗದರ್ಶಕರ ಮಾಹಿತಿಯಂತೆ ಬೆಳಗ್ಗಿನ ಮತ್ತು ಮಧ್ಯಾಹ್ನದ ಅವಧಿಯಲ್ಲಿ ಪುರವಣಿಗಳನ್ನು ಹಾಗೂ ರಾತ್ರಿಯ ಅವಧಿಯಲ್ಲಿ ಮುಖ್ಯ ಪತ್ರಿಕೆಯನ್ನು ಮುದ್ರಿಸಲಾಗುತ್ತದೆ.

ಮುದ್ರಣ ಪ್ರಕ್ರಿಯೆಯನ್ನು ವೀಕ್ಷಿಸಿದ ನಮಗೆ ಮುದ್ರಣದ ನಂತರದ ಪ್ರಕ್ರಿಯೆಯಾದ ಪ್ಯಾಕಿಂಗ್ ವಿಭಾಗಕ್ಕೆ ನಮ್ಮನ್ನು  ಸಲಹೆಗಾರರು ಕರೆದೋಯ್ದರು, ಪ್ಯಾಕಿಂಗ್ ವಿಭಾಗವನ್ನು Mail Room ಎನ್ನುತ್ತಾರೆ, ಈ ವಿಭಾಗದಲ್ಲಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಪ್ಯಾಕಿಂಗ್ ಮಾಡಬಲ್ಲ ಬೃಹತ್ ಯಂತ್ರವಿದೆ, ಈ ಯಂತ್ರವನ್ನು ಮುದ್ರಣ ಯಂತ್ರಕ್ಕೆ ಜೋಡಿಸಿ, ಇದರ ಸಹಾಯದಿಂದ ಯಾವುದೇ ಮಾನವ ಶ್ರಮದ ಅಗತ್ಯವಿಲ್ಲದೆ, ಮುದ್ರಣವಾದ ಪ್ರತಿಯಗಳನ್ನು ಮುದ್ರಣವಾಗುತ್ತಿರುವ ವೇಗದಲ್ಲೆ ಪ್ರತಿಗಳನ್ನು ಎಣಿಸಿ (Counting), ಜೋಡಿಸಿ ಅಗತ್ಯಕ್ಕೆ ತಕ್ಕಂತೆ ಅಂದರೆ 100-200-300 ಪತ್ರಿಗಳು ಒಂದು ಬಂಡಲಿಗೆ ಇರುವಂತೆ ಈ ಯಂತ್ರವೇ ಜೋಡಿಸಿ, ಪ್ಲಾಸ್ಟಿಕ್ ಹಾಳೆಯ ಕವಚದೊಂದಿಗೆ ಬಂಡಲ್ಗಳನ್ನು ಹೊರಹಾಕುತ್ತದೆ. ಈ ಪ್ರಕ್ರಿಯೆಯು ಎಷ್ಟು ನಿಖರವಾಗಿ ನಡೆಯುತ್ತದೆಂದರೆ ಯಾವುದೇ ಸಂದರ್ಭದಲ್ಲೂ ಎಲ್ಲೂ ಒಂದು ಸಣ್ಣ ತಪ್ಪೂ ಸಹ ನಡೆಯುವುದಿಲ್ಲ, ವಿದ್ಯಾರ್ಥಿಗಳಾದ ನಾವು ಹೆಚ್ಚು ಕುತೂಹಲದಿಂದ ವೀಕ್ಷಿಸಿದ ಪ್ರಕ್ರಿಯೆ ಎಂದರೂ ತಪ್ಪಾಗಲಾರದು.

ಮುದ್ರಣದ ಸಂಪೂರ್ಣ ಮಾಹಿತಿಯನ್ನು ಪಡೆದ ನಂತರ 'ಮುದ್ರಣ ಕಾಗದ ಉಗ್ರಾಣ' ಹಾಗೂ 'ಮುದ್ರಣ ಶಾಯಿ' ವಿಭಾಗಕ್ಕೆ ಭೇಟಿ ನೀಡಲಾಯಿತು, ಅಲ್ಲಿ ಕಂಡದ್ದಂತು ಇನ್ನೂ ವಿಸ್ಮಯ ಸುಮಾರು 3 ತಿಂಗಳಿಗೆ ಸಾಕಾಗುವಷ್ಟು ಮುದ್ರಣ ಕಾಗದಗಳನ್ನು ಮುಂಜಾಗ್ರತೆಗಾಗಿ ಉಗ್ರಾಣದಲ್ಲಿ ಸಂಗ್ರಹಿಸಲಾಗುತ್ತದೆ ಎಂದರೆ ಅಲ್ಲಿನ ಪರಿಸರ ಹೇಗಿತ್ತೆಂದು ನೀವೆ ಉಹಿಸಬಹುದು, ದೊಡ್ಡ ದೊಡ್ಡ ರೋಲರ್ಗಳನ್ನೊಳಗೊಂಡ ಸಾವಿರಾರು ರೋಲ್ಗಳು ಆ ಉಗ್ರಾಣದಲ್ಲಿ ಶೇಖರಿಸಿಡಲಾಗುತ್ತದೆ, ಈ ಮುದ್ರಣ ರೋಲ್ಗಳನ್ನು ದೇಶ-ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ, ಪ್ರತಿ ರೋಲ್ನ ತೂಕವು ಅಂದಾಜು 500ರಿಂದ 1250ಕೆ.ಜಿ.ಗಳಿಷ್ಟಿರುತ್ತದೆ. ಅದರ ಸಂಪೂರ್ಣ ವೀಕ್ಷಣೆಯ ನಂತರ ಕೊನೆಯಲ್ಲಿ ಭೇಟಿ ನೀಡಿದ್ದು 'ಮುದ್ರಣ ಶಾಯಿ' ವಿಭಾಗಕ್ಕೆ, ಕಲರ್ ಪ್ರಿಂಟರ್ಯಂತ್ರಗಳಲ್ಲಿ ಕಂಡಂತೆ ಚಿಕ್ಕ ಚಿಕ್ಕ ಕಾಟ್ರೇಡ್ಜ್ಗಳಿಗೆ ಹೋಲಿಸಿಕೊಂಡರೆ ಅದರದ್ದು ಆನೆಯಾಕಾರ ಇದರದ್ದು ಇರುವೆಯಾಕಾರ, ಕಪ್ಪು, ಕೆಂಪು, ನೀಲಿ ಹಾಗೂ ಹಳದಿ ಬಣ್ಣಗಳನ್ನು ಹೊಂದಿದ 4 ದೊಡ್ಡ ದೊಡ್ಡ ಗಾತ್ರದ 'ಬ್ಯಾರಲ್'ಗಳಲ್ಲಿ ತುಂಬಿದ ಅತ್ಯಂತ ಗಟ್ಟಿ ಬಣ್ಣಕ್ಕೆ ಪಂಪ್ಗಳನ್ನು ಅಳವಡಿಸುವ ಮೂಲಕ ನೇರವಾಗಿ ಮುದ್ರಣ ಯಂತ್ರಕ್ಕೆ ಸರಬರಾಜಾಗುವಂತೆ ಪೈಪುಗಳ ಮೂಲಕ ಅಳವಡಿಸಿಡಲಾಗುತ್ತದೆ ಈ ನಾಲ್ಕು ಬಣ್ಣಗಳೆ ವಿವಿಧ ಬಣ್ಣಗಳ ರೂಪಗಳನ್ನು ಪಡೆಯುತ್ತದೆ, ಈ ನಾಲ್ಕೂ ಬಣ್ಣಗಳು ಒಂದಾದಮೇಲೊಂದರಂತೆ ಮುದ್ರಣಗೊಂಡು ಈ ನಾಲ್ಕೂ ಬಣ್ಣಗಳು ಒಂದರಮೇಲೊಂದು ಕೂತಾಗ ಸ್ಪಷ್ಟ ವರ್ಣಚಿತ್ರ ಮುದ್ರಣಗೊಳ್ಳುತ್ತದೆ ಇದಕ್ಕೆ Colour Regestration ಎನ್ನುತ್ತಾರೆ. ಇಷ್ಟೆಲ್ಲಾ ಸಂಗತಿಗಳನ್ನು ತಿಳಿದುಕೊಂಡ ಸಂತಸದಲ್ಲಿದ್ದ ನಮಗೆ ಕೊನೆಯದಾಗಿ ಮುದ್ರಣ ಕಾಗದದ ರೋಲನ್ನು  ಹೇಗೆ ಯಂತ್ರಗಳು ಚಾಲುವಾಗಿರುವಾಗಲೇ ಅಳವಡಿಸಲಾಗುತ್ತದೆ (News Print Roll Auto Pasting) ಎಂಬ ಕುತೂಹಲ ಹಾಗೇ ಉಳಿಯಿತು, ಕೆಲಸದ ಅವಧಿ ಮುಗಿದಿದ್ದು ಯಂತ್ರದ ಚಾಲು ನಿಲ್ಲಿಸಿದ್ದ ಕಾರಣ ನಮಗೆ ಆ ಪ್ರಕ್ರಿಯೆಯ ವೀಕ್ಷಣೆಗೆ ಅವಕಾಶವಾಗಲಿಲ್ಲ, ಇದರಿಂದ ನಮ್ಮ ಕುತೂಹಲ ಹಾಗೇ ಉಳಿದಿದ್ದಂತೂ ಸತ್ಯ.

ಕೇವಲ ವರದಿ ತಯಾರಿಕೆಯ ವಿಚಾರಗಳು ಮಾತ್ರ ತಿಳಿದಿದ್ದ ನಮಗೆ ಮುದ್ರಣದ ವಿಚಾರಗಳು ತಿಳಿದಿದ್ದೇ ಆಗ, ಇದರಿಂದ ಬೇರೆ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಹೊಲಿಸಿಕೊಂಡರೆ ನಮ್ಮದು ವಿಶಿಷ್ಟ ಅನುಭವ, ಇದಕ್ಕಾಗಿ ನಮ್ಮ ಕೋರಿಕೆಯನ್ನು ಮನ್ನಿಸಿ ಮುದ್ರಣ ವಿಭಾಗಕ್ಕೆ ಭೇಟಿ ನೀಡಲು ಅನುಮತಿ ನೀಡಿದ ನಮ್ಮ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಡಾ. ಎಂ. ಲೀಲಾವತಿಯವರಿಗೂ ಹಾಗೂ ಕೇವಲ ಪಠ್ಯದ ವಿಚಾರವೇ ಜೀವಾಳವಲ್ಲ ಅದು ಪಠ್ಯೇತರ ಚಟುವಟಿಕೆಗಳಾಗಿಯೂ ಕೂಡ ಅಳವಡಿತವಾಗಬೇಕೆಂದು ನಮ್ಮೆಲ್ಲರನ್ನು ಕ್ಷೇತ್ರಕಾರ್ಯಕ್ಕೆಂದು ಕರೆದೋಯ್ದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಕುಸುಮಾರಾಮಚಂದ್ರರವರಿಗೂ ಪತ್ರಿಕೋದ್ಯಮ ವಿಭಾಗದ ಅಂತಿಮ ಬಿ.ಎ. ವಿದ್ಯಾರ್ಥಿಗಳಿಂದ ಧನ್ಯವಾದಗಳನ್ನು ಅರ್ಪಿಸುತ್ತೇವೆ.

ಪತ್ರಿಕೋದ್ಯಮ ವಿಭಾಗದ ಅಂತಿಮ ಬಿ.ಎ. ವಿದ್ಯಾರ್ಥಿಗಳು

ಕಾಲೇಜು ಹಾಗೂ ವಿದ್ಯಾರ್ಥಿಗಳು

  ಕಾಲೇಜು ಹಾಗೂ ವಿದ್ಯಾರ್ಥಿಗಳು
ಪ್ರೌಢ ಶಾಲೆಗಳಲ್ಲಿ ಓದುವ ಎಲ್ಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಬಹುದೊಡ್ಡ ಕನಸು ಕಾಲೇಜು, ಇವರಲ್ಲಿ 20ರಷ್ಟು ವಿದ್ಯಾರ್ಥಿಗಳು ಉತ್ತಮ ವಿದ್ಯಾರ್ಜನೆಗಾಗಿ, ಉನ್ನತ ಶಿಕ್ಷಣಕ್ಕಾಗಿ ಕಾಲೇಜಿನ ಕನಸು ಕಂಡರೆ, ಉಳಿದ 80ರಷ್ಟು ವಿದ್ಯಾರ್ಥಿಗಳು ಶಾಲೆಯೆಂಬ ಕೊಂಡಿಯನ್ನು ಕಳಚಿಕೊಂಡು ಸ್ವತಂತ್ರ ಹಕ್ಕಿಗಳಂತಾಗಲು ಕಾಲೇಜುಗಳನ್ನು ಆರಿಸಿಕೊಲ್ಳುವುದು ವಾಸ್ತವ, ಆದರೆ, ಅವರೆಲ್ಲ ಕಾಲೇಜನ್ನು ಮೋಜು-ಮಸ್ತಿಗಾಗಿಯೇ ಆರಿಸಿಕೊಳ್ಳುತ್ತಾರೆಂದು ಹೇಳಲಾಗುವುದಿಲ್ಲ, 80 ವಿದ್ಯಾರ್ಥಿಗಳಲ್ಲಿ 50 ವಿದ್ಯಾರ್ಥಿಗಳು ಅಂತಹ ಮೋಜು-ಮಸ್ತಿಗಳನ್ನು ಶಿಕ್ಷಣದೊಂದಿಗೆ ಸಮತೋಲನವಾಗಿ ನಿರ್ವಹಿಸಿಕೊಳ್ಳುತ್ತಾರೆ, ಉಳಿದ 30 ವಿದ್ಯಾರ್ಥಿಗಳಲ್ಲಿ 20 ವಿದ್ಯಾರ್ಥಿಗಳ ಪಾಲಿಗೆ ವಿದ್ಯೆ ನೆವೇದ್ಯ, ಹಾಗೆಂದು ಅವರು ಅಷ್ಟಕ್ಕೆ ನಿಲ್ಲದೆ ಕಷ್ಟಪಟ್ಟಾದರೂ ಓದುತ್ತಾರೆ, ಕೆಲವೊಮ್ಮೆ ಗುರುಗಳ ಬಳಿ 'ಭೇಷ್' ಎನ್ನಿಸಿಕೊಳ್ಳುವುದೂ ಉಂಟು, ಉಳಿದ 10 ವಿದ್ಯಾರ್ಥಿಗಳು ತಮ್ಮನನ್ನು ತಾವು 'ಅಹಂ Downಆಸ್ಮಿ, ಅಹಂ Leaderಆಸ್ಮಿ, ಅಹಂ Heroಆಸ್ಮಿ, ಅಹಂ Miss Collegeಆಸ್ಮಿ, ಅಹಂ Quineಆಸ್ಮಿ' ಎಂಬ ಭಾವನೆಯಲ್ಲಿ ಇಡೀ ಕಾಲೇಜಿನಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುವ ಪ್ರಯತ್ನದಲ್ಲಿ ಹೆಣಗಾಡುತ್ತಾರೆ, ಕೆಲವರು ಉತ್ತಮ ಮಾರ್ಗಗಳಲ್ಲಿ ಗುರುತಿಸಿಕೊಂಡರೆ, ಕೆಲವರು ಹಾದಿ ತಪ್ಪುತ್ತಾರೆ.
ಈ ಮೇಲಿನ ವಿದ್ಯಾರ್ಥಿಗಳ ವರ್ಗೀಕರಣದ ಅವಶ್ಯವಾದರೂ ಏನು? ಎಂಬ ಪ್ರಶ್ನೆಗೆ, ಇಂತಹ ವರ್ಗೀಕರಣದ ಹೊರತಾಗಿ ಕಾಲೇಜುಮಟ್ಟದಲ್ಲಿ ಸ್ನೇಹಿತರ ಪ್ರಭಾವ ಹಾಗೂ ಅವರ ಅವಶ್ಯಕತೆಯನ್ನು ವಿವರಿಸಲು ಸಾಧ್ಯವಾಗಲಾರದು. ಕಾಲೇಜು ವಿದ್ಯಾರ್ಥಿ ಜೀವನದಲ್ಲಿ ಅದರಲ್ಲೂ ಪದವಿ ಮಟ್ಟದ ವಿದ್ಯಾರ್ಥಿ ಜೀವನದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ಪಡೆಯುವ ಅನುಭವ, ಅವನ ಮುಂದಿನ ಜೀವನಕ್ಕೆ ಅತ್ಯಂತ ಸಹಕಾರಿ ಹಾಗೂ ಮಾರ್ಗದರ್ಶನಕರ ಎಂದರೆ ಬಹುಶಃ ತಪ್ಪಾಗಲಾರದು, ಇದನ್ನು ಪ್ರತಿಯೊಬ್ಬರು ಒಪ್ಪಲೇಬೇಕಾಗುತ್ತದೆ. ಅಂತಹ ಅನುಭವಗಳನ್ನು ಸ್ನೇಹಿತರ ಗುಂಪಿನಿಂದ ಪಡೆಯುವುದೇ ಹೆಚ್ಚು, ಪ್ರತಿಯೊಬ್ಬ ವಿದ್ಯಾರ್ಥಿಯು ಮತ್ತೊಬ್ಬ ವಿದ್ಯಾರ್ಥಿಗೆ ಸ್ನೇಹಿತನಾಗಿರುತ್ತಾನೆ, ಹೀಗೆ ಸ್ನೇಹಿತರ ಕೊಂಡಿ ಎಲ್ಲಿಯವರೆಗೂ ಬೆಸೆದುಕೊಂಡಿರುತ್ತದೆ ಎಂದರೆ ಆ ಕೊಂಡಿಯನ್ನು ಹುಡುಕುತ್ತಾ ಹೋದರೆ ಇಡೀ ಕಾಲೇಜು ವಿದ್ಯಾರ್ಥಿಗಳೆಲ್ಲ ಆ ಕೊಂಡಿಯಲ್ಲಿ ಬಂಧಿಸಲ್ಪಡುತ್ತಾರೆ, ಇದರಿಂದಾಗಿಯೇ ಕಾಲೇಜನ್ನು 'ಸ್ನೇಹಿತರ ಸಂಬಂಧಗಳ ಒಂದು ಜಾಲ' ಎಂದು ವ್ಯಾಖ್ಯಾನಿಸಲು ಸಾಧ್ಯ. ಈ ಸಂಬಂಧಗಳೆ ವಿದ್ಯಾರ್ಥಿಗಳ ಮಾನಸಿಕ, ಭೌದ್ಧಿಕ ಬೆಳವಣಿಗೆಗೆ ಅತ್ಯಂತ ಸಹಾಕಾರಿಯಾಗುತ್ತದೆಯಾದರೂ ಕೆಲವೊಮ್ಮೆ ಅದೇ ಸಂಬಂಧಗಳು ವಿದ್ಯಾರ್ಥಿಗಳನ್ನು ಹಾಳುಗೆಡಹುವಂತೆ ಮಾಡುತ್ತದೆ. ಯಾವನೋ ಒಬ್ಬ ಸ್ನೇಹಿತನ ತಪ್ಪಿನಿಂದಾಗಿ ಆ ಇಡೀ ನಾಲ್ಕೈದು ಸ್ನೇಹಿತರ ಗುಂಪೆ ಶಿಕ್ಷೆಗೆ ಒಳಪಡಬಹುದು, ಅಂತಹ ಅನುಭವ ಪ್ರತಿಯೊಬ್ಬರು ಅನುಭವಿಸಿರುತ್ತಾರೆ ಎಂಬುದು ಭಾಗಶಃ ನನ್ನ ಆಲೋಚನೆ.
ದಡ್ಡನೆಂದು ಕರೆಸಿಕೊಳ್ಳುವ ವಿದ್ಯಾರ್ಥಿಯು ಒಂದೇ ಬಾರಿಗೆ ಬುದ್ಧಿವಂತನಾಗುವುದು, ಬುದ್ಧಿವಂತ ವಿದ್ಯಾರ್ಥಿಯು ಹಾದಿ ತಪ್ಪುವುದು, ಇಂತಹ ನಡವಳಿಕೆಗಳ ಮೂಲ ಅಡಿಪಾಯ ಸ್ನೇಹಿತರ ಗುಂಪಿನಲ್ಲಿ ನಡೆಯುವ ಉತ್ತೇಜಕಗಳು ಹಾಗೂ ನಿರುತ್ತೇಜಕಗಳೆ ಕಾರಣಗಳು. ಸಮವಯಸ್ಕರ ಗುಂಪುಗಳು ಎಂಬ ಪರಿಕಲ್ಪನೆ ಇಲ್ಲಿ ಕಾರ್ಯ ನಿರ್ವಹಿಸಲು ಶುರುಮಾಡುತ್ತದೆ. ತಮ್ಮ ಪೋಷಕರು, ಶಿಕ್ಷಕರಿಗಿಂತ ಹೆಚ್ಚಾಗಿ ನಂಬುವ ಸ್ನೇಹಿತರ ಬಳಿ ಪ್ರತಿಯೊಂದು ವಿಷಯಗಳ ಬಗ್ಗೆ ಮುಕ್ತ ಚರ್ಚೆ ನಡೆಯುತ್ತದೆ, ಬೇರೆ ಯಾವ ಸಂಸ್ಥೆಯಿಂದಲೂ ನೀಡಲಾಗದ ಅಮೂಲ್ಯ ಶಿಕ್ಷಣವು ಇಂತಹ ಸಮವಯಸ್ಕ ಸ್ನೇಹಿತರ ಗುಂಪಿನಲ್ಲಿ ಪ್ರಾಪ್ತವಾಗುತ್ತದೆ ಎಂಬುದು ಸಮಾಜಶಾಸ್ತ್ರೀಯ ನೆಲೆಯಿಂದಲೂ ಖಾತ್ರಿಯಾಗಿದೆ. ಮನೆಗಳಲ್ಲಿ ಮಗ ಅಥವಾ ಮಗಳು ಯಾವುದೇ ದುಶ್ಚಟಗಳಿಗೆ ಒಳಗಾಗಿದ್ದಲ್ಲಿ ಮೊದಲು ಅದಕ್ಕೆಲ್ಲ ಕಾರಣ ಸ್ನೇಹಿತರೆ ಎಂಬ ಖಚಿತ ನಿಲುವು ಸ್ನೇಹಿತರ ಬಗೆಗಿನ ಪೋಷಕರ ತಿರಸ್ಕಾರತೆಯನ್ನು ತಿಳಿಸುತ್ತದೆ, ಆದರೆ ಯಾವುದೇ ವಿದ್ಯಾರ್ಥಿಯ ಅವನತಿಯಲ್ಲಿ ತೆಗಳಿಕೆಗೆ ಒಳಗಾಗುವ ಸ್ನೇಹಿತರು, ಅವರ ಉನ್ನತಿಯಲ್ಲಿ ಮರೆಯಾಗಿಬಿಡುತ್ತಾರೆ, ಆಗ ಸ್ನೇಹಿತರನ್ನು ಗುರುತಿಸುವ ಯಾವುದೇ ಪ್ರಯತ್ನಗಳು ನಡೆಯುವುದಿಲ್ಲ. ಆದರೆ, ವಿದ್ಯಾರ್ಥಿಗಳ ಯಶಸ್ಸು ಹಾಗೂ ಅವನತಿ ಎರಡರಲ್ಲೂ ಸ್ನೇಹಿತರ ಪಾತ್ರ ಇದ್ದೇ ಇರುತ್ತದೆ.
ಈ ಹಿಂದೆ ತಿಳಿಸಿದ ವರ್ಗೀಕರಣದಲ್ಲಿ ಯಶಸ್ಸಿನ ಮೂಟೆಯನ್ನು ತಮ್ಮ ಹೆಗಲಿಗೆ ಕಟ್ಟಿಕೊಂಡು ಮುನ್ನಡೆಯುವವರು ಮೊದಲನೇ ಗುಂಪಿನ ವಿದ್ಯಾರ್ಥಿಗಳು, ಅದೇ ರೀತಿ ಸಿಹಿ-ಕಹಿ ಎರಡನ್ನೂ ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಳ್ಳುವವರು 50ರಷ್ಟು ವಿದ್ಯಾರ್ಥಿಗಳು, ಹೇಗಾದರೂ ಮಾಡಿ ತಮ್ಮ ಜೀವನವನ್ನು ರೂಪಿಸಿಕೊಳ್ಳುವವರು 3ನೇ ವರ್ಗದ 20ರಷ್ಟು ವಿದ್ಯಾರ್ಥಿಗಳು, ಇನ್ನು ಕೊನೆಯ 10ರಷ್ಟು ವಿದ್ಯಾರ್ಥಿಗಳು ಮೋಜು-ಮಸ್ತಿಯಲ್ಲಿ ಮುಳುಗಿ ಯಶಸ್ಸಿನ ಬಾಗಿಲಿಗೆ ಬೀಗ ಬಿಗಿದು ತಾವಾಗಿಯೇ ಬೀಗದ ಕೈಯನ್ನು ಕಳೆದುಕೊಳ್ಳುತ್ತಾರೆ, ಇತ್ತೀಚಿನ ದಿನಗಳಲ್ಲಿ ಅಂತಹ ಕೊನೆಯ ವರ್ಗದ ವಿದ್ಯಾರ್ಥಿಗಳ ಸಂಖ್ಯಾ ಪ್ರಮಾಣವು ಗಂಭೀರ ಪ್ರಮಾಣದಲ್ಲಿ ವೃದ್ಧಿಯಾಗುತ್ತಿರುವುದು ತುಸು ಆಲೋಚಿಸಲೇ ಬೇಕಾದ ಸಂಗತಿ. ಆಧುನಿಕತೆಯ ಸೆಳತಕ್ಕೆ ಸಿಲುಕಿ ಎಲ್ಲವನ್ನೂ ಅಲ್ಪಾವಧಿಯಲ್ಲೇ ಅನುಭವಿಸಬೇಕೆಂಬ ಕಾತರತೆಯು ಇಂತಹ ವಿದ್ಯಾರ್ಥಿಗಳನ್ನು ಹಾದಿ ತಪ್ಪುವಂತೆ ಮಾಡುತ್ತಿವೆ, ಮೌಲ್ಯರಹಿತ ಶಿಕ್ಷಣ ಪದ್ಧತಿ, ನೈತಿಕತೆಯನ್ನು ಬೆಳೆಸದ ಸಮಾಜ, ಕಾಲೇಜುಗಳ ಅತಿ ಕಠಿಣ ನಿಯಮಗಳು ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಬಗೆಗಿನ ಒಲವನ್ನು ಕಳೆದು ಕೊಳ್ಳುವಂತೆ ಮಾಡುತ್ತಿವೆ. ಎಂಟ್ಹತ್ತು ಜನರ ಸ್ನೇಹಿತರ ಗುಂಪುಳ್ಳ ಸಮೂಹಗಳು ತಮ್ಮ ಅಮೂಲ್ಯವಾದ ಕ್ಷಣಗಳನ್ನು ಮರೆತು, ಸಮಯವನ್ನು ಹಾಳುಗೆಡಹುತ್ತಿದ್ದಾರೆ, ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳಲ್ಲಿ ಹೇರಳ ಪ್ರಮಾಣದಲ್ಲಿ ವಿದ್ಯಾಥರ್ಿಗಳಿಗೆ ಮೌಲ್ಯಯುತ ಶಿಕ್ಷಣ ಹಾಗೂ ನೈತಿಕ ಶಿಕ್ಷಣದ ಅವಶ್ಯಕತೆಯನ್ನು ಕುರಿತಾದ ಅನೇಕ ಕಾರ್ಯಕ್ರಮಗಳು ಪ್ರಸಾರವಾಗಿರುವುದು ಎಲ್ಲರಿಗೂ ತಿಳಿದಿರುವ ವಿಚಾರವೆ.
ಗಲ್ಲಿಗೊಂದರಂತೆ ತೆರೆದುಕೊಳ್ಳುತ್ತಿರುವ ಬಾರ್ಗಳು, ಹುಕ್ಕಾ ಪಾರ್ಲರ್ಗಳು, ಸ್ಮೋಕಿಂಗ್ ಕಾರ್ನರ್ಗಳು, ಪಬ್ಗಳು, ದುಬಾರಿ ಬೆಲೆಯ ಹೋಟೆಲ್ಗಳು ಸಾಕಷ್ಟು ಪ್ರಮಾಣದ ವಿದ್ಯಾರ್ಥಿಗಳ ಸಮಯವನ್ನು ನುಂಗಿ ಹಾಕುತ್ತಿವೆ. ಕೆಲವೊಂದು ಸ್ನೇಹಿತರ ಗುಂಪುಗಳು ಸಾಕಷ್ಟು ಸಮಯವನ್ನು ಅಂತಹ ಸ್ಥಳಗಳಲ್ಲಿ ಕಳೆಯುವುದು ಆಗಾಗ ನಮ್ಮ ಗಮನಕ್ಕೂ ಬರುತ್ತಿರುತ್ತವೆ. ಯಾವನೋ ಒಬ್ಬ ವಿದ್ಯಾರ್ಥಿ ಆ ಚಟವನ್ನು ಮೈಗೂಡಿಸಿಕೊಂಡದ್ದೇ ಆದರೆ ಆತನು ತನ್ನ ಇತರ ಸ್ನೇಹಿರತನ್ನೂ ಸಹ ಅವನಲ್ಲಿಗೆ ಸೆಳೆಯುತ್ತಾನೆ, ಒಬ್ಬನಿಂದ ಇಬ್ಬರು, ಇಬ್ಬರಿಂದ ನಾಲ್ವರು ಹೀಗೆ ವಿದ್ಯಾರ್ಥಿಗಳು ಸೆಳೆಯಲ್ಪಡುತ್ತಾರೆ, ಹಾಗಾದರೆ ವಿದ್ಯಾರ್ಥಿಗಳು ಅರ್ಥಾತ್ ಸ್ನೇಹಿತರ ಗುಂಪುಗಳು ನೈತಿಕತೆಯನ್ನು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಿಲ್ಲವೆ? ಎಂಬ ಪ್ರಶ್ನೆಗೆ 'ಸಾಧ್ಯ' ಎಂಬ ಸರಳ ಉತ್ತರವನ್ನೇ ನೀಡಬಹುದು. ಮೊದಲನೆಯದಾಗಿ ವಿದ್ಯಾರ್ಥಿಗಳಲ್ಲಿ ಭೌದ್ಧಿಕ ದಾಹ, ವಿಷಯಗಳ ಕ್ರೋಢಿಕರಣದ ದಾಹ, ಹೆಚ್ಚಾಗಬೇಕು, ವಿಷಯಗಳ ಬಗೆಗೆ ಆಳವಾದ ಜ್ಞಾನದ ಹುಡುಕಾಟದಲ್ಲಿ ತಮ್ಮನ್ನು ತೊಡಗಿಸಿಕೊಲ್ಳಬೇಕು, ಎರಡನೆಯದಾಗಿ ಆಕರ್ಷಣೆಗೆ ಒಳಗಾಗಿ ಅವನ್ನೆಲ್ಲ ಪಡೆಯಬೇಕೆಂಬ ಮನೋಭಾವ, ಅನುಭವಿಸಿ ತೀರಬೇಕೆಂಬ  ಪೂರ್ವಾಲೋಚನೆ ರಹಿತ ದೃಷ್ಠಿಕೋನ ಬದಲಾಗಬೇಕು, ಮೂರನೆಯದಾಗಿ ಸ್ನೇಹಿತರ ನಡುವೆ ಮೋಜು-ಮಸ್ತಿಯ ಅರುಹು ಕಡಿಮೆಯಾಗಬೇಕು, ಒಬ್ಬನು ಮತ್ತೊಬ್ಬನನ್ನು ಆಕರ್ಷಿಸುವ ಮನೋಭಾವಗಳು ಬದಲಾಗಬೇಕು, ನಾಲ್ಕನೆಯದಾಗಿ ಕಾಲೇಜಿನ ಕಠಿಣ ನಿಯಮಗಳು ಅಲ್ಪವಾದರೂ ಸಡಿಲಗೊಂಡು ವಿದ್ಯಾರ್ಥಿಗಳು ಇನ್ನಾದರು ತರಿಗತಿಗಳಿಗೆ ಉತ್ಸಾಹದಿಂದ ಹಾಜರಾಗುವಂತೆ ಮಾಡಬೇಕು, ಪೋಷಕರು ಅವರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಬೇಕು, ಇನ್ನೂ ಕೊನೆಯದಾಗಿ ಸರ್ಕಾರವು ಎಲ್ಲೆಂದರಲ್ಲಿ ನಾಯಿಕೊಡೆಗಳಂತೆ ಏಳುತ್ತಿರುವ ಮೋಜು-ಮಸ್ತಿ ಕೇಂದ್ರಗಳನ್ನು ನಿಯಂತ್ರಿಸಬೆಕು, ಇವೆಲ್ಲಸಾಧ್ಯವಾದದ್ದೇ ಆದರೆ ವಿದ್ಯಾರ್ಥಿಗಳಲ್ಲಿ ನೈತಿಕತೆ ಬೆಳೆಯುವುದರಲ್ಲಿ ಯಾವುದೇ ಅನುಮಾನಗಳಿಲ್ಲ, ಅದೇನೇ ಆದರೂ ಕಾಲೇಜು ಮಟ್ಟದ ವಿದ್ಯಾರ್ಥಿಗಳ ಆಲೋಚನೆಗಳು ಅವರು ಪಡೆಯುವ ಸ್ನೇಹಿತ ಸಮೂಹವನ್ನು ಅವಲಂಭಿಸಿರುತ್ತದೆ, ಆ ಸಮೂಹ ಹೇಗೆ ಆಡಿಸುತ್ತದೋ ಹಾಗೆ ವಿದ್ಯಾಥರ್ಿಯು ಕುಣಿಯುತ್ತಾನೆ, ಕುಣಿಸುವವನು ತಪ್ಪಿಲ್ಲದಂತೆ ಕುಣಿಸಿದರೆ, ಕುಣಿಯುವವನು ತಪ್ಪಿಲ್ಲದೆ ಕುಣಿಯುತ್ತಾನೆ.

ಸುರೇಶ್ ಕುಮಾರ್.ಎಂ.ಆರ್.
ಅಂತಿಮ ಬಿ.ಎ. (ಎಸ್.ಇ.ಕೆ.)
ನ್ಯಾಷನಲ್ ಪದವಿ ಕಾಲೇಜು(ಸ್ವಾಯತ್ತ).
ಬಸವನಗುಡಿ, ಬೆಂಗಳೂರು