11 Jun 2011

ಶೈಕ್ಷಣಿಕ ಭೇಟಿ : ಮುದ್ರಣ ವಿಭಾಗ (ದಿ ಪ್ರಿಂಟರ್ಸ್ ಮೈಸೂರು ಲಿ.)

ಶೈಕ್ಷಣಿಕ ಭೇಟಿ : ಮುದ್ರಣ ವಿಭಾಗ (ದಿ ಪ್ರಿಂಟರ್ಸ್ ಮೈಸೂರು ಲಿ.)
ಕೇವಲ ಶಿರ್ಷಿಕೆ, ಜಾಹಿರಾತು ಸಂಸ್ಥೆಗಳು, ಪತ್ರಿಕೆಗಳ ಉಗಮ, ಇತ್ಯಾದಿಗಳ ಬಗ್ಗೆ ಮಾತ್ರ ತಿಳಿದಿದ್ದ ನಮಗೆ ಪತ್ರಿಕಗಳು ಹೇಗೆ ಮುದ್ರತವಾಗುತ್ತವೆ, ಅದಕ್ಕೆ ಬಳಸುವ ತಂತ್ರಜ್ಞಾನವಾದರೂ ಏನು? ಪತ್ರಿಕೆಗಳು ಅಕ್ಷರಗಳ ಅಚ್ಚುಗಳ ಮೂಲಕ ಮುದ್ರಿತವಾಗುತ್ತದೆಯೆ? ಅಥವಾ ಆಧುನಿಕ ಜೆರಾಕ್ಸ್ ಯಂತ್ರದ ರೀತಿಯಲ್ಲಿ ಮುದ್ರಿತವಾಗುತ್ತವೆಯೋ? ಇಲ್ಲ ಇನ್ನೇನಾದರೂ ಬೇರೆ ರೀತಿಯ ತಂತ್ರಜ್ಞಾನದ ಸಹಾಯದಿಂದ ಮುದ್ರಣ ನಡೆಸಲಾಗುತ್ತದೆಯೋ ಎಂಬ ನಮ್ಮೆಲ್ಲರ ಕುತೂಹಲದ ಪ್ರಶ್ನೆಗಳಿಗೆ ಉತ್ತರವೆಂಬಂತೆ ಕೆಲವೇ ದಿನಗಳ ಹಿಂದೆ ಪತ್ರಿಕೋದ್ಯಮ ವಿದ್ಯಾರ್ಥಿ ಸಮೂಹವು (ಅಂತಿಮ ಬಿ.ಎ.) ಶೈಕ್ಷಣಿಕ ಮಾಹಿತಿಗಾಗಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಶ್ರೀಮತ ಕುಸುಮಾರಾಮಚಂದ್ರರವರ ಮಾರ್ಗದರ್ಶನದಲ್ಲಿ ಬೇಟಿನೀಡಿದ್ದ ದಿ ಪ್ರಿಂಟರ್ಸ ಮೈಸೂರು ಲಿ. (ಪ್ರಜಾವಾಣಿ) ಮುದ್ರಣ ವಿಭಾಗವು ನಮ್ಮೆಲ್ಲ ಕುತೂಹಲ ಪ್ರಶ್ನೆಗಳಿಗೆ ಉತ್ತರ ನೀಡಿತು.

ಮುದ್ರಣವೆಂದರೆ ಅತಿ ಸುಲಭವಾದ ಕೆಲಸವಲ್ಲ ಅದೊಂದು ಸಂಕೀರ್ಣವಾದ, ಅತೀ ತಾಂತ್ರಿಕತೆಯುಳ್ಳ, ಜವಾಬ್ದಾರಿಯುತ ಹಾಗೂ ಕೌಶಲ್ಯಪೂರ್ಣವಾದ ಪ್ರಕ್ರಿಯೆ ಎಂಬುದರ ಅರಿವಾದದ್ದೇ ಆಗ, ಮುದ್ರಣದ ಒಂದೊಂದು ಪ್ರಕ್ರಿಯೆಗೂ ಒಂದೊಂದು ಪ್ರತ್ಯೇಕ ವಿಭಾಗಗಳಿವೆ ಎಂಬುದು ತಿಳಿಯಿತು,  ಉದಾಹರಣೆಗೆ : - ಪ್ಲೇಟ್ ಮೇಕಿಂಗ್ ವಿಭಾಗ (C.T.P.ತಂತ್ರಜ್ಞಾನ), ಪ್ರಿಂಟಿಂಗ್ ವಿಭಾಗ (ಪ್ರೊಡಕ್ಷನ್), ಪ್ಯಾಕಿಂಗ್ ವಿಭಾಗ ಎಂಬಂತೆ ಇನ್ನೂ ಹಲವಾರು ವಿಭಾಗಗಳಾಗಿ ವಿಂಗಡಿಸಲ್ಪಟ್ಟಿರುತ್ತದೆ, ಒಂದು ಅಚ್ಚರಿಯ ವಿಷಯವೆಂದರೆ ದಕ್ಷಿಣ ಭಾರತದಲ್ಲಿ ಮೊಟ್ಟಮೊದಲಬಾರಿಗೆ ಜರ್ಮನ್ ತಂತ್ರಜ್ಞಾನವನ್ನು ಮುದ್ರಣ ಪ್ರಕ್ರಿಯೆಯಲ್ಲಿ ಅಳವಡಿಸಿಕೊಂಡ ಸಂಸ್ಥೆ ಎಂಬ ಹೆಗ್ಗಳಿಕೆಯೂ ಸಹ 'ದಿ ಪ್ರಿಂಟರ್ಸ್ ಮೈಸೂರು ಲಿ. ಗೆ ಸೇರುತ್ತದೆ, ಪತ್ರಿಕೆಗಳ ಗುಣಮಟ್ಟವನ್ನು ಹೆಚ್ಚಿಸಲೆಂದೆ ಜರ್ಮನಿಯ 'ಕೆ.ಬಿ.ಎ. ಕಲೋರ' ಎಂಬ ಬೃಹತ್ ಯಂತ್ರವನ್ನು (ಸುಮಾರು 4 ಮಹಡಿಗಳಷ್ಟು ಎತ್ತರ, 80 ಅಡಿ ಉದ್ದ, 10-15 ಅಡಿ ಅಗಲ) ಆಮದು ಮಾಡಿಕೊಳ್ಳಲಾಗಿದೆ. ಇಂತಹ ಬೃಹತ್ ಮುದ್ರಣ ಯಂತ್ರಗಳೂ ಇರುತ್ತವೆ ಎಂಬ ಅನುಭವ ನಮಗಾದದ್ದು ಅದೇ ಮೊದಲು,

ಕುತೂಹಲದೊಂದಿಗೆ ಸಂಸ್ಥೆಯನ್ನು ತಲುಪಿದ ನಮಗೆ ಮೊದಲು ಎದುರಾದ್ದದ್ದು ಅಲ್ಲಿನ ಭದ್ರತಾ ವಿಭಾಗದ ಸಿಬ್ಬಂದಿಗಳು, ಪೂರ್ವಸಿದ್ಧತೆಯ ಕೊರತೆಯ ಕಾರಣದಿಂದಾಗಿ ಅಲ್ಪ ಗೊಂದಲವನ್ನೂ ಎದುರಿಸಬೇಕಾಯಿತು, ಕೊನೆಗೆ ಅಲ್ಲಿಯ ಕಾರ್ಯನಿರ್ವಹಣಾ ಅಧಿಕಾರಿಗಳ ಒಪ್ಪಿಗೆಯ ಮೇರೆಗೆ ಒಬ್ಬ ಸಲಹೆಗಾರರ ಜೊತೆಗೆ ಮುದ್ರಣ ವಿಭಾಗಕ್ಕೆ ತಲುಪಿದೆವು, ಅಲ್ಲಿ ಕಂಡದ್ದು ನಮ್ಮೆಲ್ಲರ ಹುಸಿ ನಂಬಿಕೆಗಳನ್ನು ತಲೆಯಿಂದ ಒಂದೇ ಬಾರಿಗೆ ಓಡಿಸಿತು. ಅದೊಂದು ದೊಡ್ಡದಾದ 'ಹಾಲ್', ಆ ಪೂರ್ಣ ಹಾಲ್ಅನ್ನು ಆವರಿಸಿಕೊಂಡಂತೆ K.B.A. ಯಂತ್ರ, ಜೊತೆಗೆ ಅಲ್ಲಲ್ಲಿ ನೀಲಿ ಧಿರಿಸುಗಳನ್ನು ಉಟ್ಟು ಕೆಲಸದಲ್ಲಿ ಮಗ್ನರಾದ ಕೆಲಸಗಾರರು, ಇವರೆಲ್ಲ ಪತ್ರಕರ್ತರಲ್ಲದಿದ್ದರು ಇವರನ್ನು ಪತ್ರಕರ್ತೇತರರೆಂದು ಗುರುತಿಸುತ್ತಾರೆ. ನಮಗೆ ಜೊತೆಯಾದ ಆ ಸಲಹೆಗಾರರು ನಮ್ಮೆಲ್ಲರಿಗೂ ಪ್ರತಿಯೊಂದು ವಿಷಯಗಳ ಬಗ್ಗೆಯೂ ಅತ್ಯಂತ ಸೂಕ್ಷ್ಮವಾಗಿ, ತಾಳ್ಮೆಯಿಂದ ವಿದ್ಯಾರ್ಥಿಗಳು ಕೇಳುವ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುತ್ತ, ಒಂದು ಕಡೆಯಿಂದ ಮತ್ತೊಂದು ಕಡೆಗೆ, ಕೆಳಗಿನಿಂದ ಮೇಲಕ್ಕೆ, ಮೇಲಿನಿಂದ ಕೆಳಕ್ಕೆ ಹೀಗೆ ಇಡೀ ಆ ಮುದ್ರಣ ವಿಭಾಗದ ದರ್ಶನವನ್ನೇ ಮಾಡಿಸಿಕೊಟ್ಟರು.

ನಮಗೆಲ್ಲರಿಗೂ ತಿಳಿದಂತೆ ವರದಿಗಳ ಸಂಗ್ರಹಣೆಯ ನಂತರ ಅದು ಬೆರಳಚ್ಚು ವಿಭಾಗಕ್ಕೆ ವರ್ಗಾವಣೆ ಹೊಂದುತ್ತದೆ, ಹೀಗೆ ವರ್ಗಾವಣೆಗೊಂಡ ನಂತರ ಆ ವಿಷಯಗಳನ್ನೊಳಗೊಂಡ ಒಂದು ಮಾದರಿ 'ಪ್ಲೇಟ್ ಮೇಕಿಂಗ್' ( Computer to plate (C.T.P) ) ವಿಭಾಗಕ್ಕೆ ರವಾನಿಸಲಾಗುತ್ತದೆ. ನಂತರ ಸುದ್ಧಿಯನ್ನು ಪುಟಗಳ ಸಮೇತ ಒಂದು 'ಅಲ್ಯೂಮೀನಿಯಂ ಪ್ಲೇಟ್'ನ ಮೇಲೆ ಮುದ್ರಿತವಾಗುತ್ತದೆ, ಹೀಗೆ ಒಂದೊಂದು ಪುಟಕ್ಕೆ ಒಂದೊಂದು ಅಲ್ಯೂಮೀನಿಯಂ ಪ್ಲೇಟ್ಗಳನ್ನು ತಯಾರಿಸಿಕೊಂಡು ಮುದ್ರಣ ಯಂತ್ರಕ್ಕೆ ಪುಟಗಳ ಸಂಖ್ಯೆಯ ಪ್ರಕಾರ ಪ್ಲೇಟ್ಗಳನ್ನು ಮುದ್ರಣ ಯಂತ್ರಕ್ಕೆ ಅಳವಡಿಸುತ್ತಾರೆ, ಹೀಗೆ ಅಳವಡಿಸಿದ ಮೇಲೆ ಯಂತ್ರವನ್ನು ಚಾಲು ಮಾಡಲಾಗುತ್ತದೆ, ಹೀಗೆ ಒಂದು ಗಂಟೆಯ ಅವಧಿಯಲ್ಲಿ  24 ಪುಟಗಳ 70,000 ಪ್ರತಿಗಳನ್ನು ಮುದ್ರಿಸುವ ಸಾಮಥ್ರ್ಯವು ಆ ಯಂತ್ರಕ್ಕಿದೆ, ಅಲ್ಲಿನ ಮಾರ್ಗದರ್ಶಕರ ಮಾಹಿತಿಯಂತೆ ಬೆಳಗ್ಗಿನ ಮತ್ತು ಮಧ್ಯಾಹ್ನದ ಅವಧಿಯಲ್ಲಿ ಪುರವಣಿಗಳನ್ನು ಹಾಗೂ ರಾತ್ರಿಯ ಅವಧಿಯಲ್ಲಿ ಮುಖ್ಯ ಪತ್ರಿಕೆಯನ್ನು ಮುದ್ರಿಸಲಾಗುತ್ತದೆ.

ಮುದ್ರಣ ಪ್ರಕ್ರಿಯೆಯನ್ನು ವೀಕ್ಷಿಸಿದ ನಮಗೆ ಮುದ್ರಣದ ನಂತರದ ಪ್ರಕ್ರಿಯೆಯಾದ ಪ್ಯಾಕಿಂಗ್ ವಿಭಾಗಕ್ಕೆ ನಮ್ಮನ್ನು  ಸಲಹೆಗಾರರು ಕರೆದೋಯ್ದರು, ಪ್ಯಾಕಿಂಗ್ ವಿಭಾಗವನ್ನು Mail Room ಎನ್ನುತ್ತಾರೆ, ಈ ವಿಭಾಗದಲ್ಲಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಪ್ಯಾಕಿಂಗ್ ಮಾಡಬಲ್ಲ ಬೃಹತ್ ಯಂತ್ರವಿದೆ, ಈ ಯಂತ್ರವನ್ನು ಮುದ್ರಣ ಯಂತ್ರಕ್ಕೆ ಜೋಡಿಸಿ, ಇದರ ಸಹಾಯದಿಂದ ಯಾವುದೇ ಮಾನವ ಶ್ರಮದ ಅಗತ್ಯವಿಲ್ಲದೆ, ಮುದ್ರಣವಾದ ಪ್ರತಿಯಗಳನ್ನು ಮುದ್ರಣವಾಗುತ್ತಿರುವ ವೇಗದಲ್ಲೆ ಪ್ರತಿಗಳನ್ನು ಎಣಿಸಿ (Counting), ಜೋಡಿಸಿ ಅಗತ್ಯಕ್ಕೆ ತಕ್ಕಂತೆ ಅಂದರೆ 100-200-300 ಪತ್ರಿಗಳು ಒಂದು ಬಂಡಲಿಗೆ ಇರುವಂತೆ ಈ ಯಂತ್ರವೇ ಜೋಡಿಸಿ, ಪ್ಲಾಸ್ಟಿಕ್ ಹಾಳೆಯ ಕವಚದೊಂದಿಗೆ ಬಂಡಲ್ಗಳನ್ನು ಹೊರಹಾಕುತ್ತದೆ. ಈ ಪ್ರಕ್ರಿಯೆಯು ಎಷ್ಟು ನಿಖರವಾಗಿ ನಡೆಯುತ್ತದೆಂದರೆ ಯಾವುದೇ ಸಂದರ್ಭದಲ್ಲೂ ಎಲ್ಲೂ ಒಂದು ಸಣ್ಣ ತಪ್ಪೂ ಸಹ ನಡೆಯುವುದಿಲ್ಲ, ವಿದ್ಯಾರ್ಥಿಗಳಾದ ನಾವು ಹೆಚ್ಚು ಕುತೂಹಲದಿಂದ ವೀಕ್ಷಿಸಿದ ಪ್ರಕ್ರಿಯೆ ಎಂದರೂ ತಪ್ಪಾಗಲಾರದು.

ಮುದ್ರಣದ ಸಂಪೂರ್ಣ ಮಾಹಿತಿಯನ್ನು ಪಡೆದ ನಂತರ 'ಮುದ್ರಣ ಕಾಗದ ಉಗ್ರಾಣ' ಹಾಗೂ 'ಮುದ್ರಣ ಶಾಯಿ' ವಿಭಾಗಕ್ಕೆ ಭೇಟಿ ನೀಡಲಾಯಿತು, ಅಲ್ಲಿ ಕಂಡದ್ದಂತು ಇನ್ನೂ ವಿಸ್ಮಯ ಸುಮಾರು 3 ತಿಂಗಳಿಗೆ ಸಾಕಾಗುವಷ್ಟು ಮುದ್ರಣ ಕಾಗದಗಳನ್ನು ಮುಂಜಾಗ್ರತೆಗಾಗಿ ಉಗ್ರಾಣದಲ್ಲಿ ಸಂಗ್ರಹಿಸಲಾಗುತ್ತದೆ ಎಂದರೆ ಅಲ್ಲಿನ ಪರಿಸರ ಹೇಗಿತ್ತೆಂದು ನೀವೆ ಉಹಿಸಬಹುದು, ದೊಡ್ಡ ದೊಡ್ಡ ರೋಲರ್ಗಳನ್ನೊಳಗೊಂಡ ಸಾವಿರಾರು ರೋಲ್ಗಳು ಆ ಉಗ್ರಾಣದಲ್ಲಿ ಶೇಖರಿಸಿಡಲಾಗುತ್ತದೆ, ಈ ಮುದ್ರಣ ರೋಲ್ಗಳನ್ನು ದೇಶ-ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ, ಪ್ರತಿ ರೋಲ್ನ ತೂಕವು ಅಂದಾಜು 500ರಿಂದ 1250ಕೆ.ಜಿ.ಗಳಿಷ್ಟಿರುತ್ತದೆ. ಅದರ ಸಂಪೂರ್ಣ ವೀಕ್ಷಣೆಯ ನಂತರ ಕೊನೆಯಲ್ಲಿ ಭೇಟಿ ನೀಡಿದ್ದು 'ಮುದ್ರಣ ಶಾಯಿ' ವಿಭಾಗಕ್ಕೆ, ಕಲರ್ ಪ್ರಿಂಟರ್ಯಂತ್ರಗಳಲ್ಲಿ ಕಂಡಂತೆ ಚಿಕ್ಕ ಚಿಕ್ಕ ಕಾಟ್ರೇಡ್ಜ್ಗಳಿಗೆ ಹೋಲಿಸಿಕೊಂಡರೆ ಅದರದ್ದು ಆನೆಯಾಕಾರ ಇದರದ್ದು ಇರುವೆಯಾಕಾರ, ಕಪ್ಪು, ಕೆಂಪು, ನೀಲಿ ಹಾಗೂ ಹಳದಿ ಬಣ್ಣಗಳನ್ನು ಹೊಂದಿದ 4 ದೊಡ್ಡ ದೊಡ್ಡ ಗಾತ್ರದ 'ಬ್ಯಾರಲ್'ಗಳಲ್ಲಿ ತುಂಬಿದ ಅತ್ಯಂತ ಗಟ್ಟಿ ಬಣ್ಣಕ್ಕೆ ಪಂಪ್ಗಳನ್ನು ಅಳವಡಿಸುವ ಮೂಲಕ ನೇರವಾಗಿ ಮುದ್ರಣ ಯಂತ್ರಕ್ಕೆ ಸರಬರಾಜಾಗುವಂತೆ ಪೈಪುಗಳ ಮೂಲಕ ಅಳವಡಿಸಿಡಲಾಗುತ್ತದೆ ಈ ನಾಲ್ಕು ಬಣ್ಣಗಳೆ ವಿವಿಧ ಬಣ್ಣಗಳ ರೂಪಗಳನ್ನು ಪಡೆಯುತ್ತದೆ, ಈ ನಾಲ್ಕೂ ಬಣ್ಣಗಳು ಒಂದಾದಮೇಲೊಂದರಂತೆ ಮುದ್ರಣಗೊಂಡು ಈ ನಾಲ್ಕೂ ಬಣ್ಣಗಳು ಒಂದರಮೇಲೊಂದು ಕೂತಾಗ ಸ್ಪಷ್ಟ ವರ್ಣಚಿತ್ರ ಮುದ್ರಣಗೊಳ್ಳುತ್ತದೆ ಇದಕ್ಕೆ Colour Regestration ಎನ್ನುತ್ತಾರೆ. ಇಷ್ಟೆಲ್ಲಾ ಸಂಗತಿಗಳನ್ನು ತಿಳಿದುಕೊಂಡ ಸಂತಸದಲ್ಲಿದ್ದ ನಮಗೆ ಕೊನೆಯದಾಗಿ ಮುದ್ರಣ ಕಾಗದದ ರೋಲನ್ನು  ಹೇಗೆ ಯಂತ್ರಗಳು ಚಾಲುವಾಗಿರುವಾಗಲೇ ಅಳವಡಿಸಲಾಗುತ್ತದೆ (News Print Roll Auto Pasting) ಎಂಬ ಕುತೂಹಲ ಹಾಗೇ ಉಳಿಯಿತು, ಕೆಲಸದ ಅವಧಿ ಮುಗಿದಿದ್ದು ಯಂತ್ರದ ಚಾಲು ನಿಲ್ಲಿಸಿದ್ದ ಕಾರಣ ನಮಗೆ ಆ ಪ್ರಕ್ರಿಯೆಯ ವೀಕ್ಷಣೆಗೆ ಅವಕಾಶವಾಗಲಿಲ್ಲ, ಇದರಿಂದ ನಮ್ಮ ಕುತೂಹಲ ಹಾಗೇ ಉಳಿದಿದ್ದಂತೂ ಸತ್ಯ.

ಕೇವಲ ವರದಿ ತಯಾರಿಕೆಯ ವಿಚಾರಗಳು ಮಾತ್ರ ತಿಳಿದಿದ್ದ ನಮಗೆ ಮುದ್ರಣದ ವಿಚಾರಗಳು ತಿಳಿದಿದ್ದೇ ಆಗ, ಇದರಿಂದ ಬೇರೆ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಹೊಲಿಸಿಕೊಂಡರೆ ನಮ್ಮದು ವಿಶಿಷ್ಟ ಅನುಭವ, ಇದಕ್ಕಾಗಿ ನಮ್ಮ ಕೋರಿಕೆಯನ್ನು ಮನ್ನಿಸಿ ಮುದ್ರಣ ವಿಭಾಗಕ್ಕೆ ಭೇಟಿ ನೀಡಲು ಅನುಮತಿ ನೀಡಿದ ನಮ್ಮ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಡಾ. ಎಂ. ಲೀಲಾವತಿಯವರಿಗೂ ಹಾಗೂ ಕೇವಲ ಪಠ್ಯದ ವಿಚಾರವೇ ಜೀವಾಳವಲ್ಲ ಅದು ಪಠ್ಯೇತರ ಚಟುವಟಿಕೆಗಳಾಗಿಯೂ ಕೂಡ ಅಳವಡಿತವಾಗಬೇಕೆಂದು ನಮ್ಮೆಲ್ಲರನ್ನು ಕ್ಷೇತ್ರಕಾರ್ಯಕ್ಕೆಂದು ಕರೆದೋಯ್ದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಕುಸುಮಾರಾಮಚಂದ್ರರವರಿಗೂ ಪತ್ರಿಕೋದ್ಯಮ ವಿಭಾಗದ ಅಂತಿಮ ಬಿ.ಎ. ವಿದ್ಯಾರ್ಥಿಗಳಿಂದ ಧನ್ಯವಾದಗಳನ್ನು ಅರ್ಪಿಸುತ್ತೇವೆ.

ಪತ್ರಿಕೋದ್ಯಮ ವಿಭಾಗದ ಅಂತಿಮ ಬಿ.ಎ. ವಿದ್ಯಾರ್ಥಿಗಳು

No comments:

Post a Comment