14 Dec 2012

ಅಂಬೇಡ್ಕರ್ ಎಂಬ ಮಾನವ ಹಕ್ಕುಗಳ ಹೋರಾಟಗಾರನ ಸುತ್ತ....!

    ಅಂಬೇಡ್ಕರ್ ಎಂಬ ಮಾನವ ಹಕ್ಕುಗಳ ಹೋರಾಟಗಾರನ ಸುತ್ತ....!

    ಡಾ|| ಬಿ.ಆರ್. ಅಂಬೇಡ್ಕರ್, ಹೆಸರು ಕೇಳಿದೊಡನೆ ಕೆಲವರಿಗೆ ಮೈ ಪುಳಕಗೊಳ್ಳುವುದು ಖಂಡಿತ, ಅದಕ್ಕೂ ಕಾರಣಗಳುಂಟು. ಅವರ ಹೋರಾಟದ ಬದುಕು, ಸವೆಸಿದ ಜೀವನದ ಹಾದಿ, ಸಮಾಜದಲ್ಲಿ ಕೆಳವರ್ಗದವರು ಎಂದು ಗುರುತಿಸಲ್ಪಟ್ಟಿದ್ದವರಿಗೆ ತೋರಿಸಿಕೊಟ್ಟ ಮಾರ್ಗ, ಸಂವಿಧಾನದ ಮನೆಯ ನಿರ್ಮಾಣದಲ್ಲಿ ಜೋಡಿಸಿಟ್ಟ ಇಟ್ಟಿಗೆಗಳು ಇವೆಲ್ಲವೂ ಅವರ ಬಗ್ಗೆ ನಾವು ಕೊಡಬಹುದಾದಂತಹ ಪೀಠಿಕೆಯ ಮಾತುಗಳು, ಆದರೆ ನಿಜವಾಗಿಯೂ ಅಂಬೇಡ್ಕರ್ ಎಂಬ ಪುಣ್ಯಾತ್ಮ ಬರೀ ಪೀಠಿಕೆಯ ಮಾತುಗಳಿಗೆ ಮಾತ್ರ ಉಳಿದುಕೊಳ್ಳಲಾರರು.

    ಬಾಬಾ ಸಾಹೇಬರ ಪರಿನಿರ್ವಾಣ ದಿನವದು, ವಿಶ್ವವಿದ್ಯನಿಲಯ ಎಂದ ಮೇಲೆ ಅಲ್ಲಿನ ವಿದ್ಯಾರ್ಥಿಗಳು ಶೋಕ ವಿಲಾಪನೆಯ ಸಮಾರಂಭದ ತಯಾರಿಯಲ್ಲಿದ್ದರು. ಎಲ್ಲಾ ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯದ ಪುರುಷರ ವಿದ್ಯಾರ್ಥಿನಿಲಯದ ಮುಂಭಾಗದ ದೊಡ್ಡ ಅರಳೀ ಮರದ ಕೆಳಗೆ ಸಭೆ ಸೇರಿ ಬಾಬಾ ಸಾಹೇಬರ ಕುರಿತಾದ ಹಾಡುಗಳನ್ನು ಧ್ವನಿಸುತ್ತಿದ್ದರು, ಅವರ ಜೀವನಗಾಥೆಯ ವಿಚಾರಗಳನ್ನು ಗಣ್ಯರ ಸಮ್ಮುಖದಲ್ಲಿ ಮೆಲುಕು ಹಾಕುತ್ತಿದ್ದರು. ಮೊಂಬತ್ತಿಗಳನ್ನು ಹಚ್ಚಿಟ್ಟು ನೆಚ್ಚಿನ ನಾಯಕನ ಆತ್ಮಕ್ಕೆ ಶಾಂತಿ ಕೋರಿ ತಮ್ಮ ತಮ್ಮ ಕೋಣೆಗಳಿಗೆ ಬಹುಬೇಗನೆ ಹಿಂದುರುಗಿದರು, ಇನ್ನೇನು ಊಟಕ್ಕೆ ತಟ್ಟೆ ಹಿಡಿಯಬೇಕಾದ ಸಮಯವದು ಎಲ್ಲಿಂದಲೋ ಹಾರಿ ಬಂದ ಸುದ್ಧಿ ನಮ್ಮಲ್ಲಿ ಆತಂಕವನ್ನುಂಟುಮಾಡಿತು, ಅನ್ನಧಾತನ (ಬಾಬಾ ಸಾಹೇಬ್ ಅಂಬೇಡ್ಕರ್) ಭಾವಚಿತ್ರಕ್ಕೆ ಯಾರೋ ೮ ಜನ ಕಿಡಿಗೇಡಿಗಳು ಕಲ್ಲುತೂರುವ ಮೂಲಕ ಅವಮಾನಿಸಿದ್ದಾರಲ್ಲದೆ ಅವಾಚ್ಯ ಶಬ್ಧಗಳಿಂದ ಅಲ್ಲಿದ್ದ ಕೆಲವು ದಲಿತ ವಿದ್ಯಾರ್ಥಿಗಳನ್ನು ನಿಂದಿಸಿದ್ದರು ಎಂಬ ಸುದ್ಧಿ ಬಹುಬೇಗನೆ ಇಡೀ ವಿದ್ಯಾರ್ಥಿನಿಲಯಕ್ಕೆ ಹಬ್ಬಿತು. ವಿಚಿತ್ರವೆಂದರೆ ಅದಾಗಲೆ ಘಟನೆ ಘಟಿಸಿ ೨-೩ ತಾಸುಗಳೇ ಕಳೆದಿತ್ತು. ಇರಬಹುದು ನಾವು ಕೆಲ ಸ್ನೇಹಿತರು ದಲಿತೇತರ ವಿದ್ಯಾರ್ಥಿಗಳಾಗಿದ್ದರು ಈ ವಿಷಯವಾಗಿ ಒಮ್ಮೆಲೇ ಪ್ರತಿಕ್ರಿಯಿಸಿದೆವು. ಅಂಬೇಡ್ಕರ್ ಎಂಬ ಮಹಾನ್ ವ್ಯಕ್ತಿಗೆ ಅವಮಾನವೆ? ಅಸಹನೀಯ! ಖಂಡನೀಯ! ಎಂಬ ಉದ್ಗಾರ ನಮ್ಮಿಂದಲೂ ಬಂದಿತು. ಆ ಕ್ಷಣ ಆ ಕಿಡಿಗೇಡಿಗಳ ಮೇಲೆ ಅಸಹನೀಯ ಕೋಪವೇರಿತು. ಸುದ್ಧಿಯ ಬಗ್ಗೆ ಮತ್ತಷ್ಟು ವಿಚಾರಿಸಲಾಗಿ ಆ ಕಿಡಿಗೇಡಿಗಳಲ್ಲಿ ಮೂವರನ್ನು ಥಳಿಸಿ ಪೋಲೀಸರ ವಶಕ್ಕೆ ಒಪ್ಪಿಸಲಾಯಿತು ಎಂಬ ವಿಷಯ ತಿಳಿಯಿತು. ಸರಿ, ಇನ್ನೂ ಉಳಿದ ೫ ಜನರನ್ನು ಬಂಧಿಸಲೇಬೇಕೆಂದು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಧರಣಿಗೆ ಕುಳಿತರು, ಆರೋಪಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. "ಬಂಧಿಸುತ್ತೇವೆ" ಎಂಬ ಪೋಲೀಸರ ಭರವಸೆಯ ಮಾತುಗಳಿಗೆ ಒಪ್ಪಿದ ವಿದ್ಯಾರ್ಥಿಗಳು ಬೂದಿ ಮುಚ್ಚಿದ ಕೆಂಡದಂತೆ ಬೂದಿಯ ಹಿಂದೆ ಸರಿದರು. ಬರೀ ಬೂದಿ ಎಂದು ಮುಟ್ಟಲು ಮುಂದಾದ ಕಿಡಿಗೇಡಿಗಳ ಕೈಗಳು ಕಿಡಿಯಿಂದ ಸುಟ್ಟಿತು.

    ಇಲ್ಲಿ ಬಹುಚರ್ಚಿತ ವಿಷಯ ಮತ್ತು ಅತ್ಯಂತ ಕುತೂಹಲ ಪ್ರಶ್ನೆ, ಏಕೆ ಆ ೮ ಕಿಡಿಗೇಡಿ ವಿದ್ಯಾರ್ಥಿಗಳು ಅಂತಹ ದುರದೃಷ್ಟಕರ ಘಟನೆಗೆ ಕಾರಣರಾದರು? ಎಂಬುದಾಗಿದೆ. ಘಟನೆ ನಡೆದಾಗ ಅಲ್ಲಿದ್ದ ಕೆಲವರು ಹಬ್ಬಿಸಿದ ಸುದ್ಧಿಯ ಪ್ರಕಾರ ಕಿಡಿಗೇಡಿಗಳಲ್ಲಿ ಕೆಲವರು ಹೀಗೆ ಮಾತಾಡಿಕೊಳ್ಳುತ್ತಿದ್ದರು " ೭೪ % ಅಂಕ ಪಡೆದಿರುವ ನನಗೆ ದಾಖಲಾತಿ ದೊರೆಯಲಿಲ್ಲ ಆದರೆ ೫೪% ಅಂಕ ಪಡೆದ ದಲಿತ ವಿದ್ಯಾರ್ಥಿಗೆ ದಾಖಲಾತಿಯ ಅವಕಾಶ ದೊರೆತಿದೆ, ಇದು ಮೋಸ....!" ಸಹಜ ಯಾವುದೇ ವಿದ್ಯಾರ್ಥಿಯಾದರೂ ತನಗಿಂತ ಕಡಿಮೆ ಶ್ರಮಪಟ್ಟು ಹೆಚ್ಚು ಅಂಕ ಗಳಿಸಿದಾಗ ಅಥವಾ ಕಡಿಮೆ ಅಂಕಗಳಿಸಿ ಉನ್ನತ ಪ್ರತಿಭೆಯ ದಾಖಲಾತಿಯನ್ನು ಗಿಟ್ಟಿಸಿಕೊಂಡಿದ್ದಾನೆ ಎಂದಾದರೆ ಪ್ರತಿಯೊಬ್ಬರಿಗೂ ಹೊಟ್ಟೆ ಉರಿಯುವ ವಿಷಯವೆ. ಆದರೆ ವಿಷಯ ಇಷ್ಟು ಗಂಭೀರ ಸ್ವರೂಪ ಪಡೆಯಲು ಕಾರಣ ಕಿಡಿಗೇಡಿಗಳ ಅಲ್ಪಬುದ್ಧಿ, ಅಸೂಹೆ ಎಂದು ಮನವರಿಕೆ ಮಾಡಿಕೊಳ್ಳಬೇಕಷ್ಟೆ.

    ಶತಶತಮಾನಗಳಿಂದಲೂ ತುಳಿತಕ್ಕೆ ಒಳಪಟ್ಟು, ಸಾಮಾಜಿಕವಾಗಿ, ಧಾರ್ಮಿಕವಾಗಿ, ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ, ಮಾನಸಿಕವಾಗಿ ನಲುಗಿದಂತಹ ದಲಿತರು ಇಂದು ತಮ್ಮ ಹಕ್ಕುಗಳಿಗಾಗಿ ಹೋರಾಡುವ ಅವಕಾಶ ಪಡೆದಾಗ ಅಂತಹವರಿಂದ ನಾವು ( ಮೇಲ್ವರ್ಗದವರೆಂದು ಗುರುತಿಸಿಕೊಂಡವರು) ಅವಕಾಶ ವಂಚಿತರಾಗುತ್ತಿದ್ದೇವೆ ಎಂದು ಗೊಣಗಾಡುವುದಾದರೆ ಅದು ಎಷ್ಟು ಮಟ್ಟಿಗೆ ಸರಿ? ಈ ಹಿಂದೆ ಅವರ ಅವಕಾಶಗಳನ್ನು ನಾವು ಹಂಚಿಕೊಳ್ಳಲಿಲ್ಲವೇ? ಶೂದ್ರ ತಪಸ್ವಿಯಂತಹ ತಪಸ್ವಿಯನ್ನೇ ನಮ್ಮ ಪುರಾಣಗಳಲ್ಲಿ ಅವಮಾನಿಸಲಿಲ್ಲವೇ? ಸಂಸ್ಕೃತ ಪದವಾಡಿದ ನಾಲಿಗೆಗಳನ್ನು ಕತ್ತರಿಸಲಿಲ್ಲವೇ? ಕಿವಿಗಳಿಗೆ ಸೀಸವನ್ನು ಕಾಯಿಸಿ ಸುರಿಯಲಿಲ್ಲವೇ? ಸೊಂಟದ ಮೇಲ್ಭಾಗಕ್ಕೆ ವಸ್ತ್ರ ನಿಷೇಧಗೊಳಿಸಿರಲಿಲ್ಲವೇ? ಮಾನವರು ಎಂದು ನೋಡದೆ ಅವರ ಕೈಯಲ್ಲಿ ಮಲ ಶುಚಿಗೊಳಿಸಲಿಲ್ಲವೇ? ದೈಹಿಕವಾಗಿ ಉಪಯೋಗಿಸಿಕೊಳ್ಳಲಿಲ್ಲವೇ? ಸತ್ತ ಜಾನುವಾರುಗಳನ್ನು ಊಳದೆ ಅವರಿಗೆ ಭಕ್ಷಿಸಲು ನೀಡಿ ಸಂಭ್ರಮಿಸಲಿಲ್ಲವೇ? ಹೀಗೇ ಪಟ್ಟಿ ಮಾಡುತ್ತಾ ಹೋದರೆ ಇನ್ನೂ ಅನೇಕ ಅಕಲ್ಪಿತ ನಿಜ ಘಟನೆಗಳು ಉದಾಹರಣೆಯಾಗಿ ನಿಲ್ಲುತ್ತವೆ.

    ಅವಕಾಶಗಳೇ ಇಲ್ಲದ ಬದುಕಿನಲ್ಲಿ ಇಂದೆಂದಿಗೂ ಕಾಣದ ಅವಕಾಶದ ದಾರಿಯನ್ನು ಸಂವಿಧಾನದ ಬಾಗಿಲನ್ನು ತೆರೆಯುವ ಮೂಲಕ ದಲಿತರ ಆಶಾಕಿರಣ ಅಂಬೇಡ್ಕರ್ ರವರು ತೋರಿಸಿಕೊಟ್ಟರು. "ಈ ಹಾದಿಯಲ್ಲೇ ಮುನ್ನಡೆಯಿರಿ ನಿಮ್ಮ ಹಕ್ಕುಗಳನ್ನು ಪಡೆದುಕೊಳ್ಳಿರಿ, ಅವಕಾಶಗಳನ್ನು ಸೃಷ್ಠಿಸಿಕೊಳ್ಳಿರಿ" ಎಂಬ ಕರೆಯು ದಲಿತರ ಮನೆಗಳಲ್ಲಿ ನಂದಿದ್ದ ದೀಪಕ್ಕೆ ಎಣ್ಣೆಯ ಆಸರೆಯನ್ನು ಒದಗಿಸಿತು. ಎಲ್ಲಾ ಕ್ಷೇತ್ರಗಳಲ್ಲಿಯೂ (ಮುಖ್ಯವಾಗಿ ಶೈಕ್ಷಣಿಕ ಕ್ಷೇತ್ರವನ್ನೂ ಸೇರಿಸಿ) ದಲಿತರಿಗೆ ಅವಕಾಶಗಳನ್ನು ನೀಡಿ ಅವರನ್ನು ಮೇಲೆತ್ತುವ ಕಾರ್ಯಕ್ಕೆ ನಾಂದಿಯಾದರು ಬಾಬಾ ಸಾಹೇಬ್. ಕೇವಲ ಸ್ಫರ್ಧೆಯ ಮುಖಾಂತರವೇ ಶೈಕ್ಷಣಿಕ ಕ್ಷೇತ್ರವನ್ನು ಒಬ್ಬ ದಲಿತ ವಿದ್ಯಾರ್ಥಿ ಪ್ರವೇಶಿಸುತ್ತಾನೆಂದಾದರೆ ಅವನಿಗೆ ಎದುರಾಗುವ ಬೃಹತ್ ಜಾತಿ ತಡೆಗೋಡೆಗಳು ಅವನು ತಲೆಯನ್ನೇ ಎತ್ತಲಾಗದ ಪರಿಸ್ಥಿತಿಗೆ ದೂಡಬಹುದು. ಅದಕ್ಕಾಗಿಯೇ ಮೀಸಲಾತಿಯನ್ನು ನೀಡುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಪ್ರಯತ್ನಗಳು ನಡೆಯುತ್ತಿದೆ ಹಾಗೂ ಪ್ರಯತ್ನ ಫಲದಾಯಕವಾಗಿದೆ ಕೂಡ. ಈ ಹಿಂದೆ ಒಬ್ಬ ವಿದ್ಯಾರ್ಥಿನಿ ವಿದ್ಯಾರ್ಥಿ ಸಮಾವೇಶವೊಂದರಲ್ಲಿ ಕಾಂಗ್ರೆಸ್ ಯುವ ನಾಯಕ ರಾಹುಲ್ ಅವರಿಗೆ ಹಾಕಿದ ಪ್ರಶ್ನೆಗೆ ಅವರು ಉತ್ತರಿಸಿದ ಮಾತುಗಳು ಇವಕ್ಕೆಲ್ಲ ಅನ್ವಯಿಸುತ್ತವೆ. “We don’t want reservation in the name of politics and in the field of education, job and etc. it is bereave our opportunities” ಎಂಬುದು ಆಕೆಯ ಕೂಗಾಗಿತ್ತು, ಅದಕ್ಕೆ ಶಾಂತವಾಗಿಯೇ ಉತ್ತರಿಸಿದ ರಾಹುಲ್, "ನೀವು ಎಷ್ಟು ಮಂದಿ ದಲಿತ ವಿದ್ಯಾರ್ಥಿಗಳು ಈ ಕಾಲೇಜಿನಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದೀರಿ ನಿಮ್ಮ ಕೈಗಳನ್ನು ಮೇಲಕ್ಕೆ ಚಾಚಿರಿ" ಎಂಬ ಮಾತಿಗೆ ಅಲ್ಲಿ ನೆರೆದಿದ್ದ ಸಾವಿರಾರು ವಿದ್ಯಾರ್ಥಿಗಳಲ್ಲಿ ಕೆಲವೇ ಕೆಲವು ಮಂದಿ ಮಾತ್ರ ತಮ್ಮ ಕೈಗಳನ್ನು ಮೇಲಕ್ಕೆ ಚಾಚಿದರು, ಆಗ ಅಲ್ಲಿದ್ದವರಿಗೆಲ್ಲ ನಿಜವಾದ ಪರಿಸ್ಥಿತಿಯ ಬಗ್ಗೆ ಮನವರಿಕೆಯಾಯಿತು. ನಂತರ ಮಾತಾಡಿದ ರಾಹುಲ್ "ಎಷ್ಟೇ ಮೀಸಲಾತಿಯನ್ನು ಕಲ್ಪಿಸಿದರೂ ಸಹ ಇನ್ನೂ ತಮ್ಮನ್ನು ತಾವು ಸರಿಯಾಗಿ ಗುರುತಿಸಿಕೊಳ್ಳಲಾರದ ಪರಿಸ್ಥಿತಿಯಲ್ಲಿ ದಲಿತರು ಜೀವಿಸುತ್ತಿದ್ದಾರೆ, ಮೀಸಲಾತಿ ಇದ್ದರೂ ಸಹ ದೇಶದ ಬಹುಸಂಖ್ಯಾತ ಜನಾಂಗವಾದ ದಲಿತರು ಕೆಲವೇ ಕೆಲವು ಮಂದಿ ನಿಮ್ಮ ಸುತ್ತ ಇದ್ದಾರೆಂದರೆ ಇನ್ನು ಮೀಸಲಾತಿಯೇ ಇಲ್ಲದಿದ್ದರೆ ಅವರ ಗತಿ ಏನು?" ಎಂದು ದಲಿತ ಪರ ಕಾಳಜಿಯ ಮಾತುಗಳನ್ನಾಡಿದರು.

    ಮೀಸಲಾತಿ ಎಂದ ತಕ್ಷಣ ನಮ್ಮ ಕಣ್ಣ ಮುಂದೆ ಬಂದು ನಿಲ್ಲುವುದು ದಲಿತ ಮುಖಗಳು, ಅವರಿಗಾಗಿಯೇ ಈ ಮೀಸಲಾತಿ ಎಂಬ ರಕ್ಷೆ ಎಂಬ ವಾದ ಹಲವರದ್ದು, ಅದಕ್ಕೆ ನೇರ ಕಾರಣ ಅಂಬೇಡ್ಕರ್ ಎಂಬ ಕಟಕಿ ಮಾತುಗಳು ಬೇರೆ. ಅಂಬೇಡ್ಕರ್ ಅವರು ಕೇವಲ ದಲಿತರ ಆಶಾಕಿರಣ ಮಾತ್ರವಲ್ಲ ಸಮಾಜದಲ್ಲಿ ಅನ್ಯಾಯಕ್ಕೊಳಪಟ್ಟ, ತುಳಿತಕ್ಕೊಳಪಟ್ಟ ಯಾವನೇ ಆಗಿರಲಿ ಅವನ ಪರವಾಗಿ ಅಂಬೇಡ್ಕರ್ ನಿಲ್ಲುತ್ತಾರೆ. ಅವರು ಕೇವಲ ದಲಿತರ ಪರವಾದಿ ಎಂಬುದು ಹಲವರ ತಪ್ಪು ನಿಲುವಷ್ಟೆ. ಅಂಬೇಡ್ಕರ್ ಅವರ ವಿಚಾರ ಬಂದಾಗ ಅವರು ಕೇವಲ ನಮ್ಮ ಸ್ವತ್ತು ಎಂಬ ದಲಿತ ವಿದ್ಯಾರ್ಥಿಗಳ ವರ್ತನೆಯೂ ಇದಕ್ಕೆ ಕಾರಣವಾಗಿರಬಹುದು. ನಿಜವಾಗಿ ತರ್ಕಿಸುವುದಾದರೆ ಸಂವಿಧಾನವನ್ನು ರಚಿಸುವ ಸಂಧರ್ಭದಲ್ಲಿ ಅವರು ಕೇವಲ ದಲಿತರನ್ನು ಗುರಿಯಾಗಿರಿಸಿಕೊಂಡು ಅವರ ಪರವಾಗಿ ಸಂವಿಧಾನವನ್ನು ರಚಿಸಲಿಲ್ಲವಲ್ಲ? ಅದನ್ನು ಸಮಾಜ ಏಕೆ ಅರ್ಥೈಸಿಕೊಳ್ಳಲಾಗುತ್ತಿಲ್ಲವೋ ಎಂಬುದೇ ಯಕ್ಷ ಪ್ರಶ್ನೆ!

    ಮೇಲೆ ವಿವರಿಸಲಾದ ಘಟನೆಯು ಕೇವಲ ವಿಶ್ವವಿದ್ಯಾನಿಲಯಗಳಲ್ಲಿ ಮಾತ್ರವಲ್ಲ ಹಲವು ಕಡೆ ಇಂತಹುದೇ ಘಟನೆಗಳು ನಡೆಯುತ್ತಿರುತ್ತವೆ, ಆಕ್ರೋಶಭರಿತ ಮೇಲ್ವರ್ಗದ ಕೆಲ ಕಿಡಿಗೇಡಿಗಳ ಮುಂದೆ ಕೇವಲ ಮೂರ್ತಿಯಂತೆ ಅಂಬೇಡ್ಕರ್ ಅವರು ನಿಲ್ಲುತ್ತಾರೆ, ಅದಾದ ಕೆಲವೇ ಸಮಯದ ಅಂತರದಲ್ಲಿ ದಳ್ಳುರಿ ಹಚ್ಚಿಕೊಂಡು ಪ್ರಕ್ಷುಬ್ಧತೆಗೆ ಕಾರಣವಾಗುತ್ತದೆ. ಯಾರೋ ಕಿಡಿಗೇಡಿಗಳು ಮಾಡಿದಂತಹ ಹೀನ ಕೃತ್ಯಕ್ಕೆ ಇತರ ದಲಿತೇತರರನ್ನೂ ಅನುಮಾನದಿಂದ ನೋಡುವ ಮನೋಭಾವಗಳು ಬೆಳೆಯುತ್ತಿದೆ. ದಲಿತ ಮತ್ತು ದಲಿತೇತರರ ನಡುವೆ ಹೊಂದಾಣಿಕೆಗಳಿಲ್ಲದೆ ಕೆಸರೆರೆಚಾಟಗಳು ಆಗಾಗ ನಡೆಯುತ್ತಲೇ ಇರುತ್ತವೆ. ಜಾತಿ, ಭಾಷೆ, ಧರ್ಮ, ರಾಜ್ಯ ಎಂಬ ಹೆಸರಿನಲ್ಲಿ ಕಚ್ಚಾಡುವುದು ನಮ್ಮ ಭಾರತೀಯರಿಗೆ ಅಂಟಿದ ಅಂಟು ಜಾಡ್ಯವಲ್ಲವೇ? ಅದೇನೇ ಇರಲಿ! ವಿಶ್ವಮಾನವತಾವದವನ್ನು ಭೋಧಿಸಿ ಶೂದ್ರ ತಪಸ್ವಿಯನ್ನು ಉನ್ನತಕ್ಕೇರಿಸಿದವರು, ದಲಿತರಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಂತಹವರು, ಅವರ ಹಕ್ಕುಗಳಿಗಾಗಿ ಹೋರಾಡುತ್ತಿರುವ ಅನೇಕ ಮೇಲ್ವರ್ಗದ ಜನರು ನಮ್ಮ ನಡುವೆಯೇ ಇದ್ದಾರೆ. ಅಂಬೇಡ್ಕರ್ ಎಂಬ ಶಕ್ತಿ ಕೇವಲ ದಲಿತರ ಆಶಾಕಿರಣವಲ್ಲ ಇತರ ದಲಿತೇತರರ ಹಕ್ಕುಗಳ ಹೋರಾಟಗಾರ ಕೂಡ ಎಂಬ ಸತ್ಯತೆಯನ್ನು ಎಲ್ಲರೂ ಅರಿಯುವುದೇ ಆದರೆ ಇಂತಹ ಘಟನೆಗಳು ಮತ್ತೆ ಮತ್ತೆ ಪುನರಾವರ್ತಿಸುವುದಿಲ್ಲ, ಅಂಬೇಡ್ಕರ್ ಅವರ ವಿರುದ್ಧದ ಗುಸು-ಗುಸು ಸದ್ದು ಎಲ್ಲೂ ಏಳುವುದಿಲ್ಲ. ಪ್ರತಿಭಟಿಸುವ ಮನಸ್ಸುಗಳು ಶಾಂತವಾಗಲಿ, ಪರಿಸ್ಥಿತಿಯನ್ನು ಅರ್ಥೈಸಿಕೊಳ್ಳಲೀ ಎಂಬುದೇ ನಮ್ಮೆಲ್ಲರ ಆಶಯ.

    ಜೈ ಭೀಮ......



Sureshkumar M R

23 Oct 2012


" ಮಲಲಾ ಯೂಸಫ್ಜಾಯ್ ಮತ್ತು ತಾಲಿಬಾನಿ ಪಾಪಿಗಳು "

"ಅವರು ನನ್ನನ್ನು ತಡೆಯಲಾರರು, ನಾನು ನನ್ನ ಶಿಕ್ಷಣವನ್ನು ಪಡೆದೇ ತೀರುತ್ತೇನೆ. ಅದು ಶಾಲೆಯೇ ಆಗಲಿ, ಮನೆಯೇ ಆಗಲಿ ಅಥವಾ ಮತ್ತಾವುದೇ ಜಾಗವಾಗಲಿ, ಶಿಕ್ಷಣ ನನ್ನ ಮೂಲಭೂತ ಹಕ್ಕು" (“ They can not stop me. I will get my education if it is in home, school or any place. Education is my basic right”) ಎಂದು ತನ್ನ ಹಕ್ಕನ್ನು ಪ್ರತಿಪಾದಿಸಿದವಳು "ಮಲಲಾ ಯೂಸಫ್ಜಾಯ್" ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹೋರಾಡಿ ತಾಲಿಬಾನಿಗಳ ಗುಂಡೇಟಿಗೆ ಒಳಗಾದವಳು.

"ಸ್ವಾತ್ ಕಣಿವೆ"ಯು ತಾಲಿಬಾನಿಗಳ ವಶವಾದಂದಿನಿಂದಲೂ ಅಲ್ಲಿ ಅರಾಜಕತೆ
 ತಾಂಡವವಾಡುತ್ತಿತ್ತು. ಜನರ ಮೇಲಿನ ಅಟ್ಟಹಾಸ, ಸಾಮಾಜಿಕ ಕಾರ್ಯಕರ್ತರ ಕಗ್ಗೊಲೆ, ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಇತ್ಯಾದಿಗಳು ಹೆಚ್ಚುತ್ತಲೇ ಹೋದವು. ಮೂಲಭೂತವಾದಿಗಳಾದ ತಾಲಿಬಾನಿಗಳು"ಸ್ವಾತ್ ಕಣಿವೆ ಪ್ರದೇಶದಲ್ಲಿ ಹೆಣ್ಣು ಮಕ್ಕಳು ಶಿಕ್ಷಣವನ್ನು ನಿಲ್ಲಿಸಬೇಕು. ಇಲ್ಲದೇ ಹೋದರೆ ಮುಂದಿನ ನಮ್ಮ ಹಿಂಸೆಗೆ ನೀವೆ ಕಾರಣರಾಗುತ್ತೀರಿ" ಎಂದು ಎಚ್ಚರಿಸಿದ್ದೇ ತಡ, ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸಲು ಹೆತ್ತವರು ಹಿಂದೇಟಾಕುವಂತಾಯಿತು. ಶೇ ೭೦% ಹೆಣ್ಣು ಮಕ್ಕಳು ಮನೆಗಳನ್ನು ಬಿಟ್ಟು ಹೊರಬರಲೇ ಇಲ್ಲ. ಅಲ್ಲಿಗೆ ಶಿಕ್ಷಣದ ಆಸೆಯ ಭವಿಷ್ಯದ ಆಶಾಗೋಪುರವನ್ನು ಕಟ್ಟಿಕೊಂಡಿದ್ದ ಮಲಲಾ ಯೂಸಫ್ಜಾಯ್ ತರಹದ ಅನೇಕ ಹೆಣ್ಣು ಮಕ್ಕಳ ಕನಸು ಛಿದ್ರ-ಛಿದ್ರವಾದಂತಾಯಿತು.

ಮಲಲಾ ಮೂಲತಃ ಹೋರಾಟದ ಮನೋಭಾವದವಳು, ಕುಶಾಗ್ರಮತಿ. ಅವಳ ತಂದೆ ಝಯದ್-ದೀನ್-ಯೂಸಫ್ಜಾಯ್ ಕೂಡ ಒಬ್ಬ ದಿಟ್ಟ ಸಾಮಾಜಿಕ ಕಾರ್ಯಕರ್ತ. ತಾಲಿಬಾನಿಗಳ ಬೆದರಿಕೆಗೆ ಎದೆಯೊಡ್ಡಿ ತನ್ನ ಮಗಳನ್ನು ಶಿಕ್ಷಿತಳನ್ನಾಗಿಸುವುದೇ ಅವರ ಗುರಿಯಾಗಿತ್ತು. ಮಲಲಾ ತಾನು ವೈದ್ಯೆಯಾಗಬೇಕೆಂಬ ಆಸೆಯುಳ್ಳವಳಾದರೆ, ತಂದೆಗೆ ಅವಳು ಒಬ್ಬ ರಾಜಕೀಯ ನಾಯಕಿಯಾಗಬೇಕೆಂಬುದೇ ದೊಡ್ಡ ಕನಸು, ಅದಕ್ಕೆ ಅವರು ಕೊಡುವ ಕಾರಣ " ನನ್ನ ಮಗಳು ವೈದ್ಯೆಯಾಗಿ ಸಾಧಿಸುವುದಕ್ಕಿಂತ ಹೆಚ್ಚಿನದನ್ನು ಒಬ್ಬ ನಾಯಕಿಯಾಗಿ ಸಾಧಿಸಬಲ್ಲಳು, ಅವಳಲ್ಲಿ ಅಂತಹ ಶಕ್ತಿಯಿದೆ" ಎಂಬುದು.

“Stop girls education through guns” ಎಂಬ ತಾಲಿಬಾನಿಗಳ ಮೂಲಭೂತವಾದಿ ಧ್ಯೇಯ ವಾಕ್ಯವು ಇಡೀ ಸ್ವಾತ್ ಕಣಿವೆಯ ಹೆಣ್ಣುಮಕ್ಕಳ ಶಿಕ್ಷಣವನ್ನು ಬಂದೂಕಿನ ಕೊಳವೆಯ ತುದಿಯಲ್ಲಿ ನಲುಗುವಂತೆ ಮಾಡಿತು. ಜನವರಿ ೧೫, ೨೦೦೯ರ ನಂತರ ಸ್ವಾತ್ ಕಣಿವೆಯ ಯಾವೊಬ್ಬ ಹುಡುಗಿಯೂ ಶಾಲೆಗೆ ಹೋಗುವಂತಿಲ್ಲ ಎಂಬ ಫತ್ವ ಹೊರಡಿಸಿದ ತಾಲಿಬಾನಿಗಳ ಮಾತನ್ನು ಧಿಕ್ಕರಿಸಿದ ಅನೇಕ ಸಾಮಾಜಿಕ ಕಾರ್ಯಕರ್ತರ ರುಂಡಗಳನ್ನು ಕತ್ತರಿಸಿ ಶವಗಳನ್ನು ಬೀದಿಗಳಲ್ಲಿ ಎಸೆಯಲಾಯಿತು. ಶಾಲೆಗಳಿಗೆ ಹೋಗುವ ಹೆಣ್ಣುಮಕ್ಕಳ ಮುಖದ ಮೇಲೆ ಆಸಿಡ್ ದಾಳಿ ಮತ್ತು ಬೆನ್ನ ಮೇಲೆ ಛಡಿ ಏಟುಗಳಂತಹ ಶಿಕ್ಷಿಯನ್ನು ವಿಧಿಸುತ್ತಿದ್ದರು. ತಾಲಿಬಾನಿಗಳ ಅಟ್ಟಹಾಸ ಹೆಚ್ಚುತ್ತಿದ್ದಂತೆ ಸ್ವಾತ್ ಕಣಿವೆಯ ಬಹುಪಾಲು ಜನರು ಅಲ್ಲಿಂದ ಬೇರೆ ಬೇರೆ ಸ್ಥಳಗಳಿಗೆ ಹೊರಟುನಿಂತರು. ಸರ್ಕಾರದ ಆಜ್ಞೆಯಂತೆ ಮಲಲಾ ಕುಟುಂಬವು ಸಹ ಅನಿವಾರ್ಯವಾಗಿ ಸ್ವಾತ್ ಕಣಿವೆಯನ್ನು ತೊರೆಯಬೇಕಾಯಿತು.

ತಾಲಿಬಾನ್ ಆಕ್ರಮಿತ ಸ್ವಾತ್ ಕಣಿವೆಯಿಂದ ತಾಲಿಬಾನಿಗಳನ್ನು ಹಿಮ್ಮೆಟ್ಟಿಸಲು ಸರ್ಕಾರವು ಮುಂದಾಯಿತು. ತನ್ನ ಮಿಲಿಟರಿ ಶಕ್ತಿಯನ್ನು ಉಪಯೋಗಿಸಿ ಅಲ್ಲಿಂದ ಅವರನ್ನು ಹಿಮ್ಮೆಟ್ಟಿಸಿದರಾದರೂ ಅಷ್ಟು ಹೊತ್ತಿಗಾಗಲೇ ಸ್ವಾತ್ ಕಣಿವೆ ಸಿಡಿಮದ್ದು, ಬಂದೂಕಿನ ನರ್ತನದಿಂದ ನಲುಗಿ ಹೋಗಿತ್ತು. ಸಾಲದೆಂಬತೆ ೨೦೦ಕ್ಕೂ ಹೆಚ್ಚು ಶಾಲೆಗಳು ಛಿದ್ರಗೊಂಡಿದ್ದವು. ೩ ತಿಂಗಳುಗಳ ಕಾಲ ಸ್ವಾತ್ ಕಣಿವೆಯಿಂದ ದೂರವಾಗಿದ್ದ ಮಲಲಾ ಕುಟುಂಬ ಮತ್ತೆ ತಮ್ಮ ತವರು ನೆಲಕ್ಕೆ ಬಂದಿಳಿದಾಗ ಅವರ ಆನಂದಕ್ಕೆ ಪಾರವೇ ಇರಲಿಲ್ಲ. ಸ್ವಾತ್ ಕಣಿವೆಯ ನಿಶಬ್ಧತೆಯನ್ನು ವೀಕ್ಷಿಸಿದ ತಂದೆ ಝಯದ್-ದೀನ್-ಯೂಸಫ್ಜಾಯ್ "ನಾನೆಂದೂ ಇಂತಹ ನಿಶಬ್ಧತೆಯನ್ನು ಸ್ವಾತ್ ಕಣಿವೆಯಲ್ಲಿ ಕಂಡಿರಲಿಲ್ಲ" ಎಂದು ಹೇಳುವಾಗ ಅವರ ಕಣ್ಣಂಚಿಂದ ನೀರು ಸುರಿಯಲಾರಂಭಿಸಿತು.

ಮಲಲಾ, ತಾನು ಮತ್ತು ತನ್ನವರು ತಾಲಿಬಾನಿಗಳ ನೆಲದಲ್ಲಿ ಅನುಭವಿಸುತ್ತಿರುವ ಯಾತನಾ ಬದುಕನ್ನು BBCಯ ಪತ್ರಿಕೆಯಲ್ಲಿ ಬರೆಯಲಾರಂಭಿಸಿದಳು. ತಾಲಿಬಾನಿಗಳ ವಿರುದ್ಧವಾದ ಹೇಳಿಕೆಗಳು, ಸ್ತ್ರೀ ಶಿಕ್ಷಣದ ಪರವಾದ ತನ್ನ ನಿಲುವು ಇತ್ಯಾದಿಗಳನ್ನು ಅರ್ಥವತ್ತಾಗಿ ಬರೆಯಲಾರಂಭಿಸಿದ್ದು ಮೂಲಭೂತವಾದಿ ತಾಲಿಬಾನಿಗಳ ತಲೆ ಕೆಡುವಂತೆ ಮಾಡಿತು. ಸ್ವಾತ್ ಕಣಿವೆಯು ಶಾಂತವಾದ ನಂತರ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಧನಿ ಎತ್ತಿದಳು. ೨೦೦೯ರ ಆಗಸ್ಟನ ನಂತರ ಶಾಲೆಗಳು ಪ್ರಾರಂಭವಾಯಿತಾದರೂ, ಶಾಲೆಗಳಲ್ಲಿ ವಿದ್ಯಾರ್ಥಿನಿಯರ ಹಾಜರಾತಿ ಬಹಳ ಕ್ಷೀಣಿಸಿತ್ತು. ಶಿಕ್ಷಕರು ತಮ್ಮ ಪ್ರಾಣ ಪಕ್ಷಿ ಯಾವ ಸಮಯದಲ್ಲಿ ಹಾರಿ ಹೋಗುವುದೋ ಎಂಬ ಒತ್ತಡದಲ್ಲಿದ್ದರು.

ತಂದೆಯ ಉತ್ತೇಜನದಿಂದಾಗಿ, ಧೃತಿಗೆಡದೆ ಮುನ್ನುಗ್ಗಿದ ಮಲಲಾ, ನಿರಂತರವಾಗಿ BBC ಪತ್ರಿಕೆಗೆ ತನ್ನ ಲೇಖನಗಳ ಸರಣಿಯನ್ನು ಬರೆಯುತ್ತಿದ್ದಳು. ತಾಲಿಬಾನಿಗಳನ್ನು ಉದ್ದೇಶಿಸಿ “How dare the Taliban take away my basic right to education” ಎಂಬ ಆಕ್ರೋಶಭರಿತ ಮಾತುಗಳು ತಾಲಿಬಾನಿಯರಲ್ಲಿ ಮಲಲಾಳ ಕೊಲೆಯ ಯೋಚನೆ ಬರುವಂತೆ ಮಾಡಿತು. ತಾಲಿಬಾನಿಗಳ ಅಜೆಂಡಾದ ಪ್ರಕಾರ " ಇಸ್ಲಾಂ ವಿರೋಧಿಯಾಗಿ ಮಾತನಾಡುವ ಯಾರೊಬ್ಬರೂ ಬದುಕಲು ಯೋಗ್ಯರಲ್ಲ, ಅವರು ದೊಡ್ಡವರೇ ಆಗಲಿ ಅಥವಾ ಸಣ್ಣವರೇ ಆಗಲಿ ಅವರು ಶಿಕ್ಷೆಗೆ ಅರ್ಹರು" ಎಂದು ಮಲಲಾಳ ಮೇಲಿನ ಆಕ್ರಮಣವನ್ನು ಸಮರ್ಥಿಸಿಕೊಳ್ಳುತ್ತ ತಂಡದ ಮುಖ್ಯಸ್ಥ "ಮೌಲಾನಾ ಫಜುಲ್ಲಾ" ಹೇಳಿಕೊಂಡನು. ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹೋರಾಡುವುದು ಇಸ್ಲಾಂ ವಿರೋಧಿ ಚಟುವಟಿಕೆಯೇ? ಅದನ್ನು ಅಲ್ಲಾ ಹೇಳಿದನೇ? ಅಥವಾ ಪವಿತ್ರ ಖುರಾನಿನಲ್ಲಿ ಉಲ್ಲೇಖಿತವಾಗಿದೆಯೇ? ಇಂತಹ ಮಾತುಗಳು ಕೇವಲ ಮುಸ್ಲಿಂ ಮೂಲಭೂತವಾಧಿಗಳದೇ ಹೊರತು ಇಸ್ಲಾಂ ಧರ್ಮದ್ದಲ್ಲ. ಧರ್ಮವು ಎಂದೂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ವಿರೋಧಿಯಲ್ಲ ಎಂಬುದು ಮಲಲಾಳಂತಹ ಪುಟ್ಟ ಹೋರಾಟಗಾರ್ತಿಯ ಮಾತುಗಳಿಂದ ತಿಳಿದುಕೊಳ್ಳುವುದನ್ನು ಬಿಟ್ಟು ಇಸ್ಲಾಂ ವಿರೋಧಿಯಾಗಿ ನಡೆದುಕೊಳ್ಳುತ್ತಿರುವುದು ತಾಲಿಬಾನಿ ಸಂಘಟನೆಯಲ್ಲದೆ ಮಲಲಾಳಲ್ಲ.

ಆಕೆಯ ಹೋರಾಟದ ಮನೋಭಾವ, ಅವಳಲ್ಲಿ ಮೊಳಕೆಯೊಡೆದಿದ್ದಂತಹ ಸ್ತ್ರೀ ಶಿಕ್ಷಣ ಜಾಗೃತಿಯನ್ನು ಗುರುತಿಸಿ “Kids rights foundation” ಸಂಸ್ಥೆಯು ಆಕೆಗೆ "ಅಂತರರಾಷ್ಟ್ರೀಯ ಮಕ್ಕಳ ಶಾಂತಿ ಪ್ರಶಸ್ತಿ" ನೀಡಿ ಗೌರವಿಸಿತು. ತದನಂತರ ಪಾಕಿಸ್ತಾನ ಸರ್ಕಾರವು "ರಾಷ್ಟ್ರೀಯ ಯುವ ಶಾಂತಿ ಪ್ರಶಾಸ್ತಿ" ನೀಡಿ ಗೌರವಿಸಿತು. ಇದರಿಂದ ಕುಪಿತಕ್ಕೊಳಗಾದ ತಾಲಿಬಾನಿಯರು ಮಲಲಾಳನ್ನು ಮುಗಿಸಲೇ ಬೇಕೆಂದು ನಿರ್ಧರಿಸಿದರು. "ಮಲಲಾ ಅನೀತಿಯ ಮತ್ತು ಅಸಭ್ಯತೆಯ ಚಿಹ್ನೆ" ಎಂದು ಭಾವಿಸಿದರು. ೨೦೧೨ ಅಕ್ಟೋಬರ್ ೧೨ರಂದು ಶಾಲೆಯಿಂದ ಮನೆಗೆ ಶಾಲಾ ವಾಹನದಲ್ಲಿ ವಾಪಾಸಾಗುವಾಗ ಏಕಾಏಕಿ ವಾಹನದೊಳಗೆ ನುಗ್ಗಿದ ತಾಲಿಬಾನಿ ಬಂದೂಕುದಾರಿಗಳು ಹದಿನಾಲ್ಕು ವರ್ಷದ ಮಲಲಾ ಮತ್ತು ತನ್ನಿಬ್ಬರು ಸಹಪಾಠಿಗಳ ಮೇಲೆ ಗುಂಡು ಸಿಡಿಸಿದರು. "ನಿಮ್ಮ ಶಕ್ತಿಯಿಲ್ಲದ ಗುಂಡೇಟಿಗೆ ನಾ ಹೆದರಲಾರೆ" ಎಂಬ ಸಂದೇಶದ ಕುರುಹಿನಂತೆ ಮಲಲಾ ಪವಾಡ ಸಧೃಶ್ಯವಾಗಿ ಬದುಕುಳಿದಿದ್ದಾಳೆ. ಸ್ವತಃ "ಅಲ್ಲಾ"ದೇವನೇ ಅವಳ ಹೋರಾಟವನ್ನು ಪ್ರೋತ್ಸಾಹಿಸಿ ಮತ್ತೆ ಹೋರಾಟಕ್ಕಿಳಿ ಎಂದು ಅವಳ ಬೆನ್ನು ತಟ್ಟಿ ಕಳುಹಿಸಿದ್ದಾನೆ.

ಶಿಕ್ಷಣ ಪ್ರತಿಯೊಬ್ಬ ನಾಗರೀಕನ ಹಕ್ಕು. ಲಿಂಗ ಭೇಧದ ನೆಪವೊಡ್ಡಿ ಶಿಕ್ಷಣದಿಂದ ಹೆಣ್ಣು ಮಕ್ಕಳನ್ನು ದೂರ ಉಳಿಯುವಂತೆ ಮಾಡುವುದು ಅವರ ಮೂಲಭೂತ ಹಕ್ಕನ್ನು ಕಸಿದಂತೆಯೇ ಸರಿ. ಹೆಣ್ಣು ಮಕ್ಕಳಿಗೆ ಶಿಕ್ಷಣದ ಹಕ್ಕಿಲ್ಲ ಎಂದು ಯಾವ ಧರ್ಮವು ಎಲ್ಲೂ ಸಾರುವುದಿಲ್ಲ. ಸಾರುವುದಾದರೆ ಅದು ಧರ್ಮ ವಿರೋಧಿ ತಾಲಿಬಾನಿಗಳಿಂದ ಮಾತ್ರ ಸಾಧ್ಯ. ಎಲ್ಲಾ ಧರ್ಮಗಳು "ಹೆಣ್ಣು ರಕ್ಷಣೆಗೆ ಅರ್ಹಳು" ಎಂದು ತಿಳಿಸಿವೆಯೇ ಹೊರತು, ರಕ್ಷಣೆಯ ಹೆಸರಿನಲ್ಲಿ ಅವಳ ಹಕ್ಕನ್ನು ಕಸಿದುಕೊಳ್ಳಬೇಕೆಂದಲ್ಲ. ಮಲಲಾಳಂತಹ ಹೋರಾಟಗಾರ್ತಿಯರ ಪರಿಶ್ರಮದಿಂದ ಅನೇಕ ಹೆಣ್ಣುಮಕ್ಕಳಿಗೆ ಶಿಕ್ಷಣ ದೊರೆಯುವಂತಾಗಿರುವುದೇ ಇದಕ್ಕೆ ನೈಜ್ಯ ಸಾಕ್ಷಿ. ಸ್ತ್ರೀ ಶಿಕ್ಷಣಕ್ಕಾಗಿ ಹೋರಾಡುತ್ತಿರುವ ಮಲಲಾ ತನ್ನ ಜೀವ ಉಳಿಸಿಕೊಳ್ಳುವ ಹೋರಾಟದಲ್ಲಿ ಜಯಿಸಿ ಮತ್ತೆ ಕ್ರಿಯಾಶೀಲಳಾಗಲಿ, ತಾಲಿಬಾನಿಗಳಂತಹ ದುಷ್ಟ ಶಕ್ತಿಗಳು ತೊಲಗಲಿ ಎಂಬುದೇ ಅನೇಕರ ಆಶಯ.